Thursday 4 February 2016

ದೇವಿಯ ದರ್ಶನದ ಬಗ್ಗೆ ಚರ್ಚೆ

ಯಕ್ಷಗಾನದ ದೇವಿಯ ದರ್ಶನದ ಬಗ್ಗೆ ವೇದಿಕೆಯಲ್ಲಿ ಚರ್ಚೆಯಾದಷ್ಟು ಯಾವ ವೇದಿಕೆಯಲ್ಲೂ ಚರ್ಚೆಯಾಗಿಲ್ಲ. ಅದರ ಅರ್ಥ ವೇದಿಕೆಯಲ್ಲಿ ವಿರುದ್ಧ ಮತಿಗಳ ಸಂಖ್ಯೆ ಹೆಚ್ಚೆಂದು ಅರ್ಥವಲ್ಲ. ತತ್ತ್ವಬೋಧದ ಅರಸುವಿಕೆಯಲ್ಲಿ ಎಲ್ಲರೂ ಉತ್ಸುಕರೆಂದೇ ತಿಳಿಯೋಣ. ಅವರವರ ವಾದ ಸರಣಿ ಹೀಗಿದೆ:

[17/10 7:51 AM] : Ramakrishna Pejathaya
ಹರಿಯಣ್ಣ, ಲೇಖನ ಸಕಾಲಿಕವೂ ಸಯುಕ್ತಿಕವೂ ಆಗಿದೆ.
ದೇವಿಗೆ ತೆರನಾದ ಶರೀರಕಂಪನ ಸರಿಯಲ್ಲ ಎಂದು ನನಗೂ ಹಲವು ಬಾರಿ ಅನಿಸಿದ್ದಿದೆ.
ಆಕೆಯ ಕೋಪದ ಸೀಮೆಯನ್ನು ನಿರ್ಧರಿಸಬೇಕಾದದ್ದು ಕಲಾವಿದನ ಕರ್ತವ್ಯ.
ಕೋಪದ ಸೀಮೆಯನ್ನು ನಿರ್ಧರಿಸಲು ಇವೂ ಸಹಾಯಕವಾದಾವು ಎಂಬ ಕಾರಣದಿಂದ ಸ್ವಲ್ಪ ವಿವರಣೆ.
ದೃಷ್ಟ್ವಾ ಸಾ ಚಂಡಿಕಾ ಕೋಪಂ ತದ್ವಧಾಯ ತದಾಕರೋತ್
ಎಂಬಲ್ಲಿ ಕೋಪಿಸಿಕೊಂಡಳೆಂದಿದೆ. ಚಂಡಿಕಾ ಶಬ್ದವೂಚಡಿ ಕೋಪೇಎಂಬ ಧಾತುವಿನಿಂದ ನಿಷ್ಪನ್ನ. ಆದ್ದರಿಂದ, ಮಹಿಷನ ವಿಷಯದಲ್ಲಿ ಆಕೆ ಕೋಪಾವಿಷ್ಟಳಾದಳೆಂಬುದು ಸ್ಪಷ್ಟ.
ಇನ್ನು,
ತತಃ ಕ್ರುದ್ಧಾ ಜಗನ್ಮಾತಾ ಚಂಡಿಕಾ ಪಾನಮುತ್ತಮಮ್ |
ಪಪೌ ಪುನಃ ಪುನಶ್ಚೈವ ಜಹಾಸಾರುಣಲೋಚನಾ ||
ಎಂಬಲ್ಲಿಯೂ, ಕಣ್ಣಿನ ಅರುಣಿಮೆ, ಪಾನಪ್ರವೃತ್ತಿಗಳು ಭಾವತೀವ್ರತೆಯನ್ನು ತೋರುತ್ತಿವೆ. ಹೀಗೆ, ಕೋಪಾತಿಶಯ ಇತ್ತೆನ್ನುವುದು ಸ್ಫುಟವೇ. ಆದರೆ, ಶರೀರಕಂಪನಕ್ಕಾಗಲೀ, ಮೂರು ಲೋಕಗಳನ್ನೂ ಸುಡುವೆನೆನ್ನುವಷ್ಟಾಗಲೀ ಇಲ್ಲವೆಂದೇ ಹೇಳಬೇಕು.
ಸಹೃದಯ ಪ್ರೇಕ್ಷಕರಲ್ಲೂ ಔಚಿತ್ಯ ಪ್ರಜ್ಞೆ ಇರಬೇಕು. ಇಲ್ಲವಾದಲ್ಲಿ
"ದೇವಿ ದಾಲ ಲಾಯ್ಕಾತಿಜಿ" ಅನ್ನೋ ಪ್ರತಿಕ್ರಿಯೆಯೇ ಬಂದೀತು.

[17/10 12:49 PM] Prasada Asranna:
ಹರಿ ಆಸ್ರಣ್ಣರ ಅಭಿಪ್ರಾಯವನ್ನು  ಭಾಗಶಃ ಒಪ್ಪಬಹುದು ಆದರೆ ವಧೆ ಮಾಡಬೇಕಾದರೆ ತಾಮಸ ರೂಪವನ್ನು ಗ್ರಹಿಸಲೇಬೇಕು. ತಾಮಸೀ ರೂಪವು ವಧೆ ಆದ ನಂತರ ಬಿಡಲ್ಪಡುತ್ತದೆ ಇದುವೇ ಮುಂದೆ ದೈವಗಳಾಗುತ್ತವೆ. ಹಾಗಾಗಿ ತಾಮಸೀ ಸ್ವರೂಪದ ಕಾಲದಲ್ಲಿ ಇಂತಹ ಅಭಿನಯ ತಪ್ಪಾಗಲಾರದು ಪ್ರಸಾದ ಆಸ್ರಣ್ಣ.

[17/10 3:09 PM] Prasada Asranna:
ದರ್ಶನವು ಅಭಿನಯಕ್ಕೆ ಮಾತ್ರ. ನೈಜವಾಗಿರಬಾರದು

[17/10 3:30 PM] Prasada Asranna:
ದೇವತೆಗಳಿಗೆ ದರ್ಶನವಾಗುವಾಗ ಬರಬಾರದು, ರಾಕ್ಷಸನ ವಧಾ ಕಾಲದಲ್ಲಿ ಬರಬಹುದು ಕೋಪ. ಬಂದಾಗ ನಮಗೂ ನಡುಕ ಬರುವುದಿಲ್ಲವೇ? ಇದು ಯಥಾರ್ಥವಲ್ಲವೇ?

[18/10 11:38 AM] +91 94492 04884:
ವಿಮಶ೯ಕರು ತಿಳಿದರೆ ಸಾಲದು, ಕಲಾವಿದರು ತಿಳಿದು, ಅನುಭವದಿಂದ ಪಾತ್ರ ಚಿತ್ರಣವನ್ನು ಮಾಡಿದಾಗ ಮಾತ್ರ ಕಲೆಯು ಶಾಸ್ತ್ರದ ಪರಿಧಿಯೊಳಗೆ (Frame of Art) ನಿಲ್ಲಲು ಸಾಧ್ಯ.

[18/10 11:49 AM] Radhakrishna Upadhya:
ದೇವಿಯು ಮೊದಲೇ ನಿಶ್ಚಯಿಸಿದಂತೆ ಮಹಿಷಾಸುರನನ್ನು ಕೊಲ್ಲುತ್ತಾಳೆ. ಜಗನ್ಮಾತೆಯಾದ ಆಕೆಯ ಅಧೀನದಲ್ಲೇ ಸತ್ತ್ವ, ರಜಸ್ಸು, ತಮಸ್ಸು (ಬ್ರಹ್ಮ, ವಿಷ್ಣು, ಈಶ್ವರ) ಎಂಬ ಗುಣಗಳು ಇರುವಾಗ ಅವುಗಳಿಂದ ಉಂಟಾಗುವ ಯಾವುದೇ (ದರ್ಶನವೇ ಮೊದಲಾದ) ವಿಕಾರವು  ಜಗನ್ಮಾತೆಯಲ್ಲಿ ಬದಲಾವಣೆಯನ್ನು ತರಲಾದೀತೇ... ಸೃಷ್ಠಿ, ಸ್ಥಿತಿ, ಸಂಹಾರ ಎಂಬುದು ಆಕೆಗೆ ಆಟವಾಡಿದಂತೆ ಆದುದರಿಂದಲೇ "ಸೃಷ್ಠಿ ಸ್ಥಿತಿ ಪ್ರಲಯ ಕೇಲಿಷು ಸಂಸ್ಥಿತಾಯೈ" ಎಂದು ಆಕೆಯನ್ನು ಸ್ಥುತಿಸಿರುವುದು..
.. ಹರಿ ಆಸ್ರಣ್ಣರೆ

[18/10 11:53 AM] Prasadanna:
ಹರಿ ಆಸ್ರಣ್ಣರ ಸುದೀರ್ಘ ಲೇಖನ ನಾಟಕ ರಂಗದ ಸೊಬಗನ್ನು ಯಥಾವತ್ತಾಗಿ ನುಡಿಯುವುದಾದರೂ ಅದರಲ್ಲಿ ಸಣ್ಣ ವಿಮತಿ ಇದೆ. ರಾಮನನ್ನು ತ್ಯಕ್ತ ಕ್ರೋಧವೆಂದರೂ ಸೀತಾವಿರಹಿಯಾದಾಗ ಕ್ರುಧ್ದನಾಗಿ ನುಡಿಯುವುದನ್ನು ರಾಮ ಕ್ರೋಧ ಅಧ್ಯಾಯವೆಂಬುದಾಗಿ ಅರಣ್ಯ ಕಾಂಡದ ೬೪ನೇ ಸರ್ಗವನ್ನು ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದು. ಹಾಗಾದರೆ ಸತ್ತ್ವ ಗುಣ ಭೂಯಿಷ್ಠನಲ್ಲೂ ಸತ್ಯವಾದ ಕ್ರೋಧವನ್ನು ಕಾಣುತ್ತೇವೆ. ಅಲ್ಲದೆ ನಮ್ಮ ಕಟೀಲು ಕ್ಷೇತ್ರ ಮಾಹಾತ್ಮ್ಯೆಯಲ್ಲಿ ದೇವಿಯ ಕೋಪ ಉಪಶಮನಕ್ಕಾಗಿ ಎಳನೀರಿನ ಅಭಿಷೇಕ ಮಾಡಿದರು ಎಂದಿದೆ. ಹಾಗಾಗಿ ಸತ್ತ್ವವು ಅಧಿಕವಾಗಿ ಇದ್ದವರನ್ನು ಸಾತ್ತ್ವಿಕರೆಂದು ಕರೆದರೂ ಕೋಪ ಬರುವ ಕಾಲದಲ್ಲಿ ಕೋಪವು ಬಾರದೆ ಇದ್ದರೆ ದೋಷವಾಗುತ್ತದೆ. ಅವರ ಧೀರೋದಾತ್ತ ಗುಣದ ಭಂಗವಾಗುತ್ತದೆ. ಕೋಪ ಬಂದಾಗ ನಡುಕ ಉಂಟಾಗುವುದು ಪ್ರಕೃತಿ.

[18/10 12:04 PM] Srihari Asranna:
ರಾಮನ ವಿಚಾರದಲ್ಲಿ ಹೇಳುವುದಾದರೆಜಾತೇ ನರೇಷು ಜನನೇ ನರವತ್ ಪ್ರವೃತ್ತಿಃಎನ್ನುವಂತೆ ರಾಮನ ವ್ಯವಹಾರ ಕಾಣುತ್ತದೆ. ಸ್ವತಃ ರಾಮನೇಆತ್ಮಾನಮ್ ಮಾನುಷಮ್ ಮನ್ಯೇ ಅನ್ನಲಿಲ್ಲವೇ?’ ಆದ್ದರಿಂದ ಕೋಪವನ್ನು ಯಥಾವತ್ತಾಗಿ ತೆಗೆದುಕೊಳ್ಳಬಹುದು.
ಯದಾರುಣಾಖ್ಯಸ್ತ್ರೈಲೋಕ್ಯೇ ಮಹಾಬಾಧಾಮ್ ಕರಿಷ್ಯತಿ ತದಾಹಂ ಭ್ರಾಮರಂ ರೂಪಮ್ ಕೃತ್ವಾ ಸಂಖ್ಯೆಯಷಟ್ಪದಮ್. ತ್ರೈಲೋಕ್ಯಸ್ಯ ಹಿತಾರ್ಥಾಯ ವಧಿಷ್ಯಾಮಿ ಮಹಾಸುರಮ್ ಭ್ರಾಮರೀತಿ ಮಾಂ ಲೋಕಾಸ್ತದಾ ಸ್ತೋಷ್ಯಂತಿ ಸರ್ವದಾ" ಎಂಬಲ್ಲಿ ದೇವಿಯೇ ಅರುಣಾಸುರನ್ನು ಭ್ರಾಮರಿಯಾಗಿ ಮುಂದೊಂದು ದಿನ ಕೊಲ್ಲುತ್ತೇನೆ ಅಂದಳು. ಅಂದರೆ ಅವಳಿಂದ ಮೊದಲೇ ನಿಗದಿಪಡಿಸಿದ ಯುದ್ಧವೆಂದೂ ಅದರಲ್ಲಿ ಅರುಣನೆಂಬವ ಪೂರ್ವನಿರ್ಧರಿತ ಖಲನೆಂದೂ ತೋರುತ್ತದೆ. ಹಾಗಿರುವಾಗ ಕೋಪವೂ ಪೂರ್ವನಿರ್ಧರಿತ ಎಂದೇ ಅನ್ನಬೇಕು. ಕೇವಲ ಭಕ್ತರಿಗೆ ಉಪಾಸನೆಗೆ ಎಳನೀರು ಅಭಿಷೇಕದ ದಾರಿ ಮಾಡಿಕೊಡಲೆಂದೇ ದೇವಿಯು ಉಪಕ್ರಮಕ್ಕೆ ಮುಂದಾದಳು ಎಂದು ಯಾಕೆ ತರ್ಕಿಸಬಾರದು. ತರ್ಕವೆಂಬುದು ಅದ್ಭುತ ರಸದ ವ್ಯಭಿಚಾರೀಭಾವವಲ್ಲವೇ?

[18/10 12:15 PM] Prasada Asranna:
ಹರಿ ಆಸ್ರಣ್ಣರೇ, ಕೋಪವನ್ನು ನಟನೆ ಎನ್ನಲು ಆಗುವುದಿಲ್ಲ. ಮಿಥ್ಯಾ ರೂಪ ದೋಷ ಬರುತ್ತದೆ. ಸತ್ಯವೆಂದಲ್ಲಿ ಕೋಪದೊಡನೆ ಸಹಜವಾದ ನಡುಕವನ್ನು ಒಪ್ಪಲೇಬೇಕು.

[18/10 12:20 PM] Srihari Asranna:
ನಟನೆಯೇ ಸತ್ಯ. ಸುಳ್ಳಲ್ಲ.

[18/10 12:25 PM] Prasada Asranna:
ನಟನೆಗಾದರೂ ಕೋಪವನ್ನು ಆರಿಸಿಕೊಂಡಲ್ಲಿ ಕೋಪದೊಡನೆ ಸಹಜವಾದ ನಡುಕದ ನಟನೆ ಬೇಕೇ.

[18/10 12:41 PM] Srihari Asranna:
ಅದಕ್ಕೆ ನಡುಕದ ಅನಿವಾರ್ಯತೆ ಇದೆಯೇ?

[18/10 1:34 PM] Attoor Ravi:
ಕಾವ್ಯದಲ್ಲಿ ಬರತಕ್ಕಂತಹ ಭೀಭತ್ಸ, ಅಶ್ಲೀಲ .... ಸನ್ನಿವೇಶಗಳನ್ನು ರೂಪಕದಲ್ಲಿ ತರಬಾರದೆಂದು ಶಾಸ್ತ್ರನಿಯಮವುಂಟಷ್ಟೇ... ಅಂದರೆ ಪ್ರೇಕ್ಷಕನಿಗೆ ವ್ಯತಿರಿಕ್ತ ಪರಿಣಾಮಬೀರಬಾರದೆಂದು, ಲೋಕದ ಸ್ವಾಸ್ಥ್ಯವನ್ನ ಕಾಪಾಡಬೇಕೆಂದೇ ನಿಯಮ.
ಯಕ್ಷಗಾನಕಲೆಯು, ತಳಮಟ್ಟದ ಪ್ರೇಕ್ಷಕನಿಗೂ ಬೋಧಪ್ರದ.
ಹಾಗಂತ ಇಲ್ಲಿ ಬರತಕ್ಕಂತಹ ಅಭಿನಯವನ್ನ ವಿಮಶೆ೯ಯ ದೃಷ್ಟಿಯಲ್ಲಿಯೂ ನೋಡಿ, ಮೆರೆ ಮೀರಿರುವ ಅಭಿನಯವನ್ನ ಖಂಡಿಸದಿದ್ದಲ್ಲಿ ಕಲಾಪ್ರಾಕಾರ ಸೊರಗುವ ಅಪಾಯವುಂಟು....
ಕಲೆಯು, ಮನೋರಂಜನಾ ಪ್ರೇಕ್ಷಕ ವಗ೯ವನ್ನ ಬೆಳೆಸುವ ಉದ್ದೇಶದಿಂದ ಮಾತ್ರ ಹುಟ್ಟಿಕೊಂಡಿಲ್ಲವಷ್ಟೇ.... ನೀತಿ, ಸಂದೇಶ, ಇತಿಹಾಸ-ಪುರಾಣಗಳನ್ನ ತದ್ರೂಪದಲ್ಲಿ (ಮೂಲಾಶಯಕ್ಕೆ ಭಂಗ ಬರದಂತೆ) ಲೋಕಕ್ಕೆ ಕೊಡುವ ಉದ್ದೇಶವೂ ಉಂಟಷ್ಟೇ.....

ಬಾಧ್ಯತೆಯನ್ನರಿತು ವ್ಯವಹರಿಸಿದಲ್ಲಿ ಪೂಣ೯ಶಾಸ್ತ್ರೀಯ ಕಲೆಯೆಂದು ಕರೆಯಲ್ಪಡುವ ಯಕ್ಷಗಾನವು ರೂಪದಲ್ಲಿಯೇ ಉಳಿಯಲು ಸಾಧ್ಯ.

[19/10 1:46 AM] Attoor Ravi: 
    "ದಶ೯ನಮ್"
  "ಕೋಪ ಬಂದಾಗ ನಡುಕ ಉಂಟಾಗುವುದು ಪ್ರಕೃತಿ"
                        - ಪ್ರಸಾದ ಆಸ್ರಣ್ಣ

ಅಭಿನಯ - ಅಭಿ ಎಂಬ  ಉಪಸಗ೯, ನೀ ಎಂಬ ಧಾತು;
"ಯಸ್ಮಾತ್ ಪ್ರಯೋಗಂ ನಯತೇ ತಸ್ಮಾದಭಿನಯಃ ಸ್ಮೃತಃ"
ನಾಟಕದ ಪ್ರಯೋಗವನ್ನು ಪ್ರೇಕ್ಷಕರ ಕಡೆ (ಅಭಿ) ಒಯ್ಯುವುದು (ನೀ) ಇದು ಎಂಬುದಕ್ಕೆಅಭಿನಯಎಂಬ ರೂಪ ಎಂದು.
ಆಂಗಿಕ, ವಾಚಿಕ, ಸಾತ್ತ್ವಿಕ ಮತ್ತು ಆಹಾಯ೯ ಇವು ಅಭಿನಯದ ನಾಲ್ಕು ಪ್ರಾಕಾರಗಳು.
ಆಂಗಿಕ-ಶರೀರ ಮತ್ತು ಅಂಗಾಂಗಗಳ ಚಲನವಲನಗಳು,
ವಾಚಿಕ-ಮಾತುಗಾರಿಕೆ,
ಸಾತ್ತ್ವಿಕ-ಭಾವ ಭಾವನೆಗಳ ಅಭಿವ್ಯಕ್ತಿ,
ಆಹಾಯ೯ - ವೇಷಭೂಷಣ ರಂಗಸಜ್ಜಿಕೆ.

ಆಂಗಿಕಾಭಿನಯವು ಮೂರು ತರದ್ದು.
ಶಾರೀರಿಕ, ಮುಖಜ ಮತ್ತು ಚೇಷ್ಟಾಕೃತ.

ತನ್ನ ಸುತ್ತಮುತ್ತಲಿನ ಜಗತ್ತಿಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ಮನುಷ್ಯನಿಗೆ ಶರೀರ ಮತ್ತು ಅಂಗೋಪಾಂಗಗಳೇ ಅತ್ಯಂತ ಪ್ರಾಚೀನ ಅಭಿಜಾತ ಸಾಧನ.
ಬಾಯ್ಮಾತಿನ ಭಾಷೆ ತೀರ ಇತ್ತೀಚಿನದು (ಆಂಗಿಕಾಭಿನಯಕ್ಕೆ ಹೋಲಿಸಿದಲ್ಲಿ).
ಆಂಗಿಕ ಭಾಷೆ - ವಿಶ್ವದಭಾಷೆ.
ಭಯದಿಂದಾಗಿ ಮೈಮುದುಡುವುದು, ಕಂಪಿಸುವುದು; ನಿದ್ರೆಗಾಗಿ ಕಣ್ಣು ಮುಚ್ಚುವುದು,
ಆಹಾರಕ್ಕಾಗಿ ಹೊಟ್ಟೆ ಒಳಸೇರುವುದು, ನಾಲಗೆಗೆ ನೀರು ಬಿಡುವುದು; ಕೋಪದಿಂದಾಗಿ ನಡುಗುವುದು.... ಇದೆಲ್ಲವೂ ಪ್ರಾಣಿವಗ೯ಕ್ಕೆ ನಿಸಗ೯ಪ್ರಾಪ್ತವಾದುದು (by birth).
ಕೆಲವೊಂದು ಸಂದಭ೯ಗಳಲ್ಲಿ ವಾಚಿಕಾಭಿನಯಕ್ಕಿಂತಲೂ ಆಂಗಿಕಾಭಿನಯವೇ ಹೆಚ್ಚು ಪರಿಣಾಮಕಾರಿ.

ಸಮಾಜದಲ್ಲಿ ಉಚ್ಚ-ನೀಚ ತಾರತಮ್ಯ ಹತ್ತಿರ ೫೦ ವಷ೯ಗಳ ಹಿಂದಿನವರೆಗೂ ಸತ್ಯವಷ್ಟೇ
(ತಿಳಿವಳಿಕೆಯ{ಜ್ಞಾನ}ವಿಷಯದಲ್ಲಂತೂ ಸಾವ೯ಕಾಲಿಕ).
ಹಿಂದಿನ ಕಾಲದಲ್ಲಿ ರೂಪಕವನ್ನು ಅರಮನೆಯಲ್ಲಿ ಇಲ್ಲವೇ ದೇವಸ್ಥಾನದಲ್ಲಿ ಪ್ರದಶಿ೯ಸುವುದು ವಾಡಿಕೆಯಾಗಿತ್ತು.
ಅರಮನೆಯಲ್ಲಿ ಪ್ರದಶಿ೯ಸಿದಾಗ ಪ್ರೇಕ್ಷಕ ವಗ೯ವು ಉಚ್ಛವಗ೯ದ್ದಾಗಿರುತ್ತಿತ್ತು.
ದೇವಸ್ಥಾನದಲ್ಲಿ ಪ್ರೇಕ್ಷಕರು ಜನಸಾಮಾನ್ಯರು.
ಅರಮನೆಯ ಪ್ರದಶ೯ನವು ಲೋಕಧಮೀ೯ಶೈಲಿಯದಾಗಿರಬೇಕು.
ಪಾತ್ರಗಳು, ವೇಷಭೂಷಣಗಳನ್ನು ಧರಿಸುವ ಅಗತ್ಯವಿದ್ದಿರಲಿಲ್ಲ.
ರಂಗಸ್ಥಳದ ರಂಗಸಜ್ಜಿಕೆ ಇದಾವುದೂ ಅಗತ್ಯವಿರಲಿಲ್ಲ.
ಇದಕ್ಕೆ ವಿರುದ್ಧವಾಗಿ ದೇವಸ್ಥಾನಗಳ ಆವಾರದಲ್ಲಿಯ ಪ್ರದಶ೯ನ ನಾಟ್ಯಧಮೀ೯ ಆಗಿರಬೇಕು.
ಇಲ್ಲಿ ಪ್ರೇಕ್ಷಕರು ಜನಸಾಮಾನ್ಯರಲ್ಲವೇ, ಅವರಿಗೆ ವೇಷಭೂಷಣಗಳು, ರಂಗಸಜ್ಜಿಕೆ ಇಂತಹದು ಮೆಚ್ಚುಗೆಯಲ್ಲವೇ.
(ಆದ್ಯರಂಗಾಚಾಯ೯ - ಶ್ರೀರಂಗ ಸಾರಸ್ವತ ಸಂ - )
(ಸಾಮಾನ್ಯರೇ ಪ್ರೇಕ್ಷಕರಾದ್ದರಿಂದ ಆಂಗಿಕಾಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯವಿತ್ತು.)

ಇನ್ನು ದಶ೯ನದ ವಿಷಯಕ್ಕೆ ಬರೋಣ -
ಸಾಮಾನ್ಯವಾಗಿ ದಕ್ಷಿಣಭಾರತದಲ್ಲಿ ದೈವಿಕ ವಿಷಯದಲ್ಲಿ ಪೂಣ೯ಭಾವಪರವಶತೆಯನ್ನ(ಕರುಣೆ)ಜನಸಾಮಾನ್ಯರು ಹೊಂದುವಂತದ್ದು ದಶ೯ನದಲ್ಲಿಯೇ.
ಸೋದಾಹರಣೆಗೆ - ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಉತ್ಸವಬಲಿ, ನಾಗದಶ೯ನ, ದೈವಕೋಲ; ಉತ್ತರಕನಾ೯ಟಕದ ಕರಗೋತ್ಸವ, ತಮಿಳುನಾಡಿನ ಕಾವಡಿ ಉತ್ಸವ... ಇತ್ಯಾದಿ.

ಯಕ್ಷಗಾನವು ನಾಟ್ಯಧಮೀ೯ಶೈಲಿಯದಾದ್ದರಿಂದ ಒಂದು ಮಟ್ಟದಲ್ಲಿ ದೇವಿಯ ನಡುಕವೂ ಸಹ್ಯವೆಂದು ತೋರುವುದಿಲ್ಲವೇ....

ಮೇಧಾವಿಗೆ, ಹರಿಕಥಾಕಾಲಕ್ಷೇಪವು ಅವನ ಹಸಿವನ್ನ ನೀಗಿಸುವಲ್ಲಿ ಸಮಥ೯ವಾದೀತೋ!!... ಇಲ್ಲವಷ್ಟೇ
ಅವನ ಗಮನವಿರಬೇಕಾದ್ದು ಜ್ಞಾನಿಗಳ ಉಪನ್ಯಾಸಕ್ಕೆ.
ಸಂಗೀತಶಾಸ್ತ್ರದ ಪ್ರವೇಶವಿರುವ ರಸಿಕನಿಗೆ ನಮ್ಮೂರಿನ ಭಜನೆಯಿಂದ ರಾಗಭಾವಗಳನ್ನ ಒಳದುಂಬಿಸಿಕೊಂಡಾನೋ....
ಅವನು ಹೋಗಬೇಕಾದ್ದು ಶಾಸ್ತ್ರೀಯ ಸಂಗೀತ ಕಛೇರಿಗೆ.

ಆದ್ದರಿಂದ ಯಕ್ಷಗಾನವನ್ನ ಲೋಕಧಮೀ೯ಶೈಲಿಯಲ್ಲಿ ಈಕ್ಷಿಸದೆ (ಪರ್ಯಾಲೋಚನೆ, ವಿಮಶೆ೯) ನಾಟ್ಯಧಮೀ೯ಶೈಲಿಯಲ್ಲಿ ವೀಕ್ಷಿಸುವುದು (ನೋಟ)
(ಶ್ರೀದೇವೀದಶ೯ನಮ್) ಲೋಕಹಿತದೃಷ್ಟಿಯಲ್ಲಿ, ನಾಟ್ಯಶಾಸ್ತ್ರದ ಪರಿಧಿಯಲ್ಲಿ ಸರಿಯಲ್ಲವೇ...

ದಶ೯ನವು (ನಡುಕ), ಪ್ರಕೃತಿಯಾದ್ದರಿಂದ ಪ್ರಕೃತಿಯೂ(ಚಂಡಿಕೆ)ನಡುಗಲೇಬೇಕು.

" ತತ್ ಶ್ರುತಂ ತತ್ ಶಿಲ್ಪಂ ಸಾ ವಿದ್ಯಾ ಸಾ ಕಲಾ /
ಯೋಗೋ ತತ್ ಕಮ೯ ಯನ್ನಾಟ್ಯೇsಸ್ಮಿನ್ನ ದೃಶ್ಯತೇ //"
             -ನಾಟ್ಯಶಾಸ್ತ್ರ - ಶ್ಲೋ - ೧೧೬

"ಇಂತಹ ಜ್ಞಾನ, ಇಂತಹ ಶಿಲ್ಪ, ಇಂತಹ ವಿದ್ಯೆ, ಇಂತಹ ಕಲೆ, ಇಂತಹ ಯೋಗ, ಇಂತಹ ಕಮ೯ ನಾಟ್ಯದಲ್ಲಿ ಇಲ್ಲ ಎಂಬುದಿಲ್ಲ".

                                        - ರವೀಂದ್ರ ಅತ್ತೂರು

[19/10 1:55 AM] Srihari Asranna:
ದರ್ಶನವಿಲ್ಲದೇ ಅದೇ ಭಾವ ಬರುವಾಗ ನಡುಕ ಬೇಕೇ? ಅನಿವಾರ್ಯವೇ ಎಂದು ನನ್ನ ಪ್ರಶ್ನೆ. ಈಗಲೂ ಕಟೀಲುಮೇಳದ ಬಾಯಾರು ರಮೇಶ ಭಟ್ರು, ತೋಡಿಕಾನ ವಿಶ್ವನಾಥ ಗೌಡರ ನಡುಕವಿಲ್ಲದ ದೇವಿ ಜಗನ್ಮಾನ್ಯ ಅನ್ನಿಸಲಿಲ್ಲವೇ? ಆಪ್ಯಾಯಮಾನವಾಗಲಿಲ್ಲವೇ? ನಡುಕ ಪ್ರಕೃತಿ ಎಂದರೆ ಅವರಲ್ಲಿ ದೋಷ ಹೇಳಿದಂತೆ. ಬೇರೆ ಅಭಿನಯದ ಕೊರತೆ ಇದ್ದಲ್ಲಿ ನಡುಕದ ಅನಿವಾರ್ಯತೆ ಇದೆ ಎಂದು ನನ್ನ ಭಾವನೆ. ಇಲ್ಲದಿದ್ದಲ್ಲಿ ಇಲ್ಲ.

[19/10 2:03 AM] Srihari Asranna578-355:
ದೋಷವೇ ಇಲ್ಲದ ಕಾವ್ಯ ಇಲ್ಲ ಎನ್ನುವ ಕಲ್ಪನೆಯಲ್ಲಿ  ತದದೋಷೌ ಶಬ್ದಾರ್ಥೌ ಸಗುಣಾವನಲಂಕೃತೀ ಪುನಃ ಕ್ವಾಪಿಎಂದು ಲಕ್ಷಣವನ್ನು ಹೇಳಿ ಅಲ್ಲಿಯನಞ್ಗೆಈಷತ್ಎನ್ನುವ ಅರ್ಥ ಎಂದು ವ್ಯಾಖ್ಯಾನಿಸಿದರಂತೆ. ಹಾಗೆ ಇಲ್ಲಿಯೂ ದೋಷವು ಗ್ರಾಹ್ಯ ಎಂದೆನ್ನಬಹುದೇ ಹೊರತು ದೋಷವೇ ಅಲ್ಲ ಎನ್ನಲಾದೀತೇ ರವಿಯಣ್ಣ.

[19/10 2:57 AM] Attoor Ravi:
ಹರಿಯಣ್ಣ,
ವೈಮಶ್ಯ೯ಗುಣ ಪ್ರೇಕ್ಷಕನಿಗೆ ಅನಿವಾಯ೯,
ಆದರೆ, ಸಾಮಾನ್ಯನಿಗೆ ಭಾವ (ಸಾತ್ತ್ವಿಕಾಭಿನಯ) ಅರಿವಿಗೆ ಬರುವುದೋ ? ಇಲ್ಲವಷ್ಟೇ.
ಇಲ್ಲಿ ನಟಾಭಿನಯಾಪೂಣ೯ತೆಯ ಪ್ರಶ್ನೆಗಿಂತಲೂ ಸಾಮಾನ್ಯ ಪ್ರೇಕ್ಷಕನಿಗೆ ಭಾವವನ್ನ ಒಳದುಂಬಿಸಲು ಸಾಧ್ಯವೇ...

ಸಾಮಾನ್ಯವಾಗಿ ಉಳಿದೆಲ್ಲಾ ಕಲಾಪ್ರಾಕಾರಗಳು ಸೀಮಿತ ಪ್ರೇಕ್ಷಕವಗ೯ದ ನಿರ್ಬಂಧಕ್ಕೊಳಪಟ್ಟಿದೆ.
ಆದರೆ ಯಕ್ಷಗಾನವು, ಆಂಗಿಕಾಭಿನಯದೊಟ್ಟಿಗೆ ವಾಗಭಿನಯವೂ ಸಮ್ಮಿಲಿತವಾದುದರಿಂದ ಕೆಳಸ್ತರದ ಪ್ರೇಕ್ಷಕವಗ೯ಕ್ಕೂ ಒಂದು ಮಟ್ಟದ ಕಲಾನುಭೂತಿಯನ್ನ ಕೊಡುತ್ತದೆ ಅಥವಾ ರಂಜಿಸುತ್ತದೆ.

ನಡುಕವು, ತದ್ಭಾವಾಸಮಥ೯ ನಟನೆಯ ಬಿಂಬಿತ.
ಆದರೂ ಬಹುಸಂಖ್ಯಾ ಕೆಳವಗ೯ಪ್ರೇಕ್ಷಕದೃಷ್ಟಿಯಿಂದ ಒಂದುಮಟ್ಟಿನ ದೋಷವು ಗ್ರಾಹ್ಯವೆಂದು ಪರಿಗಣಿಸುವುದು ಪೂಣ೯ಕಲಾಪ್ರಾಕಾರದ ( certificate ನೃತ್ಯವಿದುಷಿ ಪದ್ಮಾ ಸುಬ್ರಹ್ಮಣ್ಯಮ್ ಅವರದ್ದು) ಧನಾತ್ಮಕ ನಡೆ ಎಂದು ನನ್ನಾಭಿಪ್ರಾಯ.

                      - ರವೀಂದ್ರ ಅತ್ತೂರು

[19/10 3:17 AM] Srihari Asranna:
ನಡುಕ ಪ್ರೇಕ್ಷಕನಿಗಾಗಿ ಆರಂಭವಾದದ್ದೇ ಯಾ ಕಲಾವಿದನೇ ಆರಂಭಿಸಿದ್ದೇ? ನಾಗತನುವಿನಲ್ಲಿ ದರ್ಶನದಂತೆ.

[19/10 3:19 AM] Srihari Asranna:
ನಡುಕದ ದೇವೀ ತೀರಾ ಅರ್ವಾಚೀನ.

[19/10 6:53 AM] Ramakrishna Pejathaya:
ಕೋಪದಲ್ಲಿ ನಡುಕವು ಸಹಜ ಎಂಬುದು ಒಪ್ಪಲಾಗದೆಂದು ನನ್ನ ಅನಿಸಿಕೆ.
ಯಕ್ಷಗಾನದಲ್ಲಿಯೂ ಕೂಡಾಎಲವೋ ಸೂತನ ಮಗನೇಇತ್ಯಾದಿ ಪದ್ಯಗಳಲ್ಲಿ ಕರ್ಣಾರ್ಜುನರಲ್ಲಿ ಪರಸ್ಪರ ಕೋಪಭಾವವಿದ್ದರೂ ನಡುಕಕ್ಕವಕಾಶವಿಲ್ಲ.
ವೀರರಸಕ್ಕೂ ರೌದ್ರರಸಕ್ಕೂ ಇರುವ ವ್ಯತ್ಯಾಸವನ್ನು ಮನಗಂಡರೆ ಗೊಂದಲ ಬಗೆಹರಿದೀತು.

[19/10 10:54 AM] Ramakrishna Pejathaya:
ಪೌರಾಣಿಕ ಕಥೆಯನ್ನು ರೂಪಕವನ್ನಾಗಿ ರಂಗಕ್ಕೆ ತರುವಾಗ ರಸಪೋಷಣೆಯೂ ಮುಖ್ಯವಾಗುತ್ತದೆಂಬುದು ಸರ್ವಸಮ್ಮತ. ಆದರೆ, ಪಾತ್ರಸ್ವಭಾವಾನುಸಾರವಾಗಿಯೇ ಅದು ರೂಪುಗೊಳ್ಳಬೇಕು. ಇಲ್ಲವಾದಲ್ಲಿ ಅದೂ ದೋಷವಾಗಿ ಪರಿಗಣಿಸಲ್ಪಡುತ್ತದೆ. ಭವಭೂತಿಯ ಉತ್ತರ ರಾಮಚರಿತದಲ್ಲಿ ರಾಮನು ಪದೇ ಪದೇ ಮೂರ್ಛೆಗೊಳ್ಳುವುದು ಚಿತ್ರಿತವಾಗಿದೆ. ಮೂರ್ಛಾಪ್ರಸಂಗಗಳು ಪ್ರೇಕ್ಷಕನ ಬಗೆಯನ್ನು ಕರುಣಾರ್ದ್ರಗೊಳಿಸುವಲ್ಲಿ ಅದ್ಭುತ ಯಶಸ್ಸನ್ನು ಕಂಡರೂ, ಧೀರೋದಾತ್ತ ನಾಯಕನಾದ ರಾಮನು ಪದೇ ಪದೇ ಮೂರ್ಛೆಗೊಳ್ಳುವುದು ಉಚಿತವಲ್ಲವೆಂದು ಇದನ್ನೂ ದೋಷಕುಕ್ಷಿಗೇ ಸೇರಿಸಿದ್ದಾರೆ ರಸಜ್ಞ ವಿಮರ್ಶಕರು. ಪಾತ್ರಗಳ ಧೀರೋದಾತ್ತಾದಿ ವಿಭಾಗವು ಮೂಲಾನುಸಾರಿಯಾಗಿಯೇ ಇರಬೇಕು. ಇಲ್ಲಿ ಕವಿಗೆ ಅಥವಾ ಕಲಾವಿದನಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲ. (ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ.)
ಹಿನ್ನೆಲೆಯಲ್ಲಿ ಚಂಡಿಕಾಪಾತ್ರ ಪ್ರಕೃತಿಯನ್ನು ನಿರ್ಧರಿಸಿಕೊಳ್ಳಬೇಕು. ದೇವೀಮಾಹಾತ್ಮ್ಯದ ಪ್ರಕರಣದ ಶ್ಲೋಕಗಳಲ್ಲಿ ಆಕೆಯ ಕೋಪರೂಪ ಹೇಳಲ್ಪಟ್ಟಿದ್ದು ಹೌದಾದರೂ ಅದು ರೌದ್ರ ರಸಕ್ಕೆ ಪರ್ಯಾಪ್ತವಾಗಿಲ್ಲ. ರೌದ್ರರಸದ ಸ್ಥಾಯೀ ಭಾವ ಕ್ರೋಧ. ಕೋಪ ಬೇರೆ, ಕ್ರೋಧ ಬೇರೆ. ಆದ್ದರಿಂದ, ಆಕೆಯಲ್ಲಿ ರೌದ್ರ ರಸವನ್ನಾರೋಪಿಸುವುದು ಉಚಿತವೆನಿಸದು. (ರೌದ್ರವನ್ನೊಪ್ಪಿಕೊಂಡರೂ, ಮಹಿಷನ ರೌದ್ರಕ್ಕೂ ದೇವಿಯ ರೌದ್ರಕ್ಕೂ ವ್ಯತ್ಯಾಸವಿದೆ ತಾನೇ? ಯಾವುದೇ ರಸದ ಪರಿಣಾಮವು ಪಾತ್ರಾನುಸಾರವಾಗಿರುವುದೇ ಹೊರತು ಏಕರೂಪವಾಗಿರುವುದಿಲ್ಲ.)
ಪ್ರಕೃತ, ದೇವಿಯಲ್ಲಿ ಕೋಪವೆಂಬ ಸಂಚಾರಿಭಾವದಿಂದ ಕೂಡಿದ ಉತ್ಸಾಹವೆಂಬ ಸ್ಥಾಯೀಭಾವವುಳ್ಳ ವೀರರಸದ ಪರಾಕಾಷ್ಠೆಯಿದೆಯಾದ್ದರಿಂದ, ರೌದ್ರರಸದ ಪರಾಕಾಷ್ಠೆಯ ವ್ಯಂಜಕಗಳಾದ, ತಾಮಸಸ್ವಭಾವಕ್ಕೆ ಸಲ್ಲುವ, ಅತಿಶಯಿತ ಶರೀರಕಂಪನಾದಿಗಳು ಉಚಿತವಲ್ಲವೆಂದೂ, ಅದರಿಂದ ರಸಾಸ್ವಾದಕ್ಕೆ ಯಾವುದೇ ಭಂಗವೂ ಆಗದೆಂದೂ ನನ್ನ ಸದ್ಯದ ಅನಿಸಿಕೆ :-) ಪ್ರತಿಕ್ರಿಯೆಗಳಿಗೆ ನಮೋವಾಕ್ ಪೂರ್ವಕ ಸ್ವಾಗತ : -)

[20/10 3:38 PM] Prasada Asranna:
ರಾಮಕೃಷ್ಣ ಪೆಜತ್ತಾಯರ ವಾದ ಸಮಂಜಸವಾದರೂ ಉತ್ಸವಾದಿ ಬಲಿ ದರ್ಶನಗಳಲ್ಲಿ ಓಡ ಬಲಿಗಳಲ್ಲಿ ದೇವರು ಹೊರುವವರು ಸಾತ್ತ್ವಿಕ ದೇವರನ್ನು ಹೊತ್ತಿದ್ದರೂ ದರ್ಶನಾಧಿಕ್ಯವನ್ನು ನಾವು ನಿರೀಕ್ಷಿಸುತ್ತೇವೆ. ದರ್ಶನವು ನ್ಯೂನವಾಗಿದ್ದಲ್ಲಿ ಅವನು ಸಾಲದು ಎಂಬ ಭಾವ ನಮಗಾಗುತ್ತದೆ ಅದೇ ರೀತಿ ನಾಗದರ್ಶನಾದಿಗಳಲ್ಲಿ ಹಿಂಗಾರ ಹೆಚ್ಚು ಹುಡಿ ಮಾಡುವ ಪಾತ್ರಿಗಳು ಆಕರ್ಷಣೀಯರಾಗುತ್ತಾರೆ ಇಂತಹ. ನಟನೆಗಳು ಅಧ್ಯಾತ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಇದನ್ನೇ ನಾವು ಸಂಭ್ರಮ ಎನ್ನುವುದು, ಭ್ರಮೆಯಾಗಿದ್ದರೂ ಪರಿಣಾಮವು ಅಧ್ಯಾತ್ಮಕ್ಕೆ ಪ್ರಯೋಜನವಾಗುತ್ತದೆ ಅದೇ ರೀತಿ ಪ್ರಕೃತದಲ್ಲಿ ಈಗಿನ ಬ್ಯಾಂಡ್ ಹಾಗೆ.

[20/10 5:56 PM] Ramakrishna Pejathaya:
ಪ್ರಸಾದಾಸ್ರಣ್ಣರೇ, ನಿಮ್ಮ ಕಾಣ್ಮೆಜಾಣ್ಮೆಗಳು ನಮಗೆ ಮಾನ್ಯವೇ
ಆದರೆ, ಕಲೆಯು ಕಲಾವಿದನನ್ನೂ ಪ್ರೇಕ್ಷಕನನ್ನೂ ಎತ್ತರಿಸುವಂಥದ್ದಾಗಬೇಕೇ ಹೊರತು, ಪ್ರೇಕ್ಷಕರಿಗಾಗಿ ಕಲೆಯ ಸ್ತರವೇ ಇಳಿಯುವಂತಾಗಕೂಡದು. ನಾಟ್ಯಶಾಸ್ತ್ರವು ಪ್ರೇಕ್ಷಕನನ್ನು ಸಹೃದಯ ಎಂದಿದ್ದರ ಹಿನ್ನೆಲೆಯೂ ಇಲ್ಲಿ ಮನನೀಯ.

[20/10 11:01 PM] Prasada Asranna:
ಪೆಜತ್ತಾಯರೇ,  ಈಗ ಯಕ್ಷಗಾನವನ್ನು ರಸೋತ್ಪತ್ತಿ ಕಲೆ ಎನ್ನುವುದಕ್ಕಿಂತ ಹೆಚ್ಚಾಗಿ ದೇವರ ಪೂಜೆ ಎಂದು ಆರಾಧಿಸುತ್ತಾರೆ. ಆಗ ಇಂತಹ ಸಹನೆ ಬೇಕಾಗುತ್ತದೆ. ಕೇವಲ ರಸಾಸ್ವಾದನೆಗೆ ಎಂಬ ಉದ್ದೇಶವಿದ್ದು ಯಕ್ಷಗಾನ ಮಾಡಿಸುವಿರಾದರೆ ನಿಮ್ಮ ಧೋರಣೆ ಸರಿಯಾಗಬಹುದೋ  ಏನೋ?

[20/10 11:10 PM] Srihari Asranna:
ನಾಗದರ್ಶನ, ಕೋಲ ಇತ್ಯಾದಿಗಳಿಗೂ ಕಲೆಗೂ ಸಾಮ್ಯ ಎಷ್ಟರಮಟ್ಟಿಗೆ ಸಮ. ಅಲ್ಲಿ ವಸ್ತುಸ್ಥಿತಿ ಏನೇ ಇರಲಿ ದೈವತ್ವದ ಅಬೇಧವೇ ನಂಬುಗೆ. ಪರಕಾಯ ಪ್ರವೇಶವೇ ಒಪ್ಪಿತ. ಆದ್ದರಿಂದಲೇ ಅವ ಸಿದ್ಧಮಂತ್ರನೆಂದು ನಂಬಿದ ಭಾವುಕರಿಂದ ಅವ ವಂದ್ಯ. ಆದರೆ ಇಲ್ಲಿ ತೀರ ಭಿನ್ನ. ವೇದಿಕೆಯಿಂದ ಕೆಳಗಿಳಿದ ಮೇಲೆ ಅವನಿಗೆ ಯಾವ ಗೌರವವೂ ಇಲ್ಲ. ‘ಆಯನ ಸರಿ ಆಯಿಜಿ ಯಾ ಲಾಯಿಕ್ ಅಥವಾ ಆತ್ಂಡ್ಅಂತ ಹೇಳುವವರೇ  ಹೆಚ್ಚು.
ಅದೇ ಇಲ್ಲಿಯೂ ಹೌದಾದರೆ ಅಲೌಕಿಕವೇ ಪ್ರಧಾನವಾಗಿ ಜನಸಾಮಾನ್ಯರಿಗೆ ಮುಟ್ಟುವುದಾದರೆ ಪೂರ್ಣಪ್ರಮಾಣದ ದರ್ಶನವನ್ನೇ ಇಲ್ಲಿಯೂ ತರಬಹುದಲ್ಲ. ಬ್ಯಾಂಡ್ ಎನ್ನುವುದು ಸಾಧು ಎನ್ನುವಷ್ಟರ ಮಟ್ಟಿಗೆ ಮುಟ್ಟಿದ ಪ್ರಪಂಚ ಇದನ್ನು ಖಂಡಿತ ಒಪ್ಪುತ್ತದೆ. ಆಗಲಿ ಎನ್ನೋಣವೇ....... ಯೋಚಿಸಲೇಬೇಕಾದ ವಿಷಯ. ಮುಂದೊಂದು ದಿನ ಯಕ್ಷಗಾನವೇ ಇಲ್ಲವಾಗುತ್ತದೆ. ಅದನ್ನು ಒಪ್ಪಲು ಸಾಮಾನ್ಯ ಪ್ರೇಕ್ಷಕನಿಗೆ ಸಾಧ್ಯವಾದೀತು. ಸಹೃದಯನಿಗೆ ಅಲ್ಲ.

[21/10 9:53 AM] Prasada Asranna:
ದರ್ಶನಮ್, ಕೊನೆಯ ಮಾತು
ಕಟೀಲಿನಲ್ಲಿದೇವೀ ಮಾಹಾತ್ಮ್ಯಂಪ್ರಸಂಗ ಯಾಕೆ ಆಗುವುದಿಲ್ಲ. ಅಂದರೆ ಮಹಿಷಾಸುರನ ವಧಾಕಾಲದಲ್ಲಿ ದೇವಿ ಹಾಕಿದ ವೇಷದಲ್ಲಿ ಆವೇಶ ಅತ್ಯಧಿಕ ಎಂಬ ಭಾವನೆಯಿಂದ ಪೂರ್ವಜರು ನಿಷೇಧಿಸಿದ್ದಾರೆ. ಭಾವನೆಯನ್ನು ಅಪ್ಪಿ ಒಪ್ಪಿದ ನಮ್ಮ ಪರಂಪರೆ ಇರುವಾಗ ವೇಷದಲ್ಲಿ ಸಾಮಾನ್ಯ. ಲಘು ಆವೇಶದಿಂದ. ಕಲೆಯ ಕೊಲೆಯಾಗದು ಎಂದು ನನ್ನ ಅಭಿಪ್ರಾಯ. ವಾದಕ್ಕೆ  ಪೂರ್ಣ ವಿರಾಮ.

[21/10 11:55 PM] Attoor Ravi:                     
"ದೇವೀ ಮಾಹಾತ್ಮ್ಯಂ"

ಜಗನ್ಮಾತೃವಿನ ಮಾತೃತ್ವವನ್ನ, ಕರುಣೆಯನ್ನ,  ಮುದ್ರಾಸ್ವರೂಪದಂತಿರುವ ಅವಳ ವಾಕ್ಯವನ್ನ, ಲೋಕಹಿತದೃಷ್ಟಿಯನ್ನ, ಸಾಮಥ್ಯ೯ವನ್ನ ನೋಡೋಣ.

"ನೇತ್ರಾಸ್ಯನಾಸಿಕಾಬಾಹುಹೃದಯೇಭ್ಯಸ್ತಥೋರಸಃ /
ನಿಗ೯ಮ್ಯ ದಶ೯ನೇ ತಸ್ಥೌ ಬ್ರಹ್ಮಣೋsವ್ಯಕ್ತಜನ್ಮನಃ //"
                                         - ಸಪ್ತಶತೀ -_೯೦
ಮಧುಕೈಟಭರಿಂದ ಭೀತಿಗೊಳಗಾದ ಬ್ರಹ್ಮ - ಪ್ರಜಾಪತಿಯು ಶ್ರೀಹರಿಯನ್ನು ಎಚ್ಚರಗೊಳಿಸುವುದಕ್ಕಾಗಿ ಆತನ ಕಣ್ಣುಗಳಲ್ಲಿ ನೆಲೆಸಿದ್ದ ಯೋಗನಿದ್ರೆಯನ್ನ ಏಕಾಗ್ರಮನಸ್ಸಿನಿಂದ ಸ್ತುತಿಸಲು;
ಮಹಾಮಾಯೆಯು, (ವಿಷ್ಣುವಿನ) ಕಣ್ಣು, ಬಾಯಿ, ಮೂಗು, ಬಾಹುಗಳು, ಹೃದಯ, ಎದೆ ಎಂಬೀ ಭಾಗಗಳಿಂದ ಹೊರಬಂದು ಅವ್ಯಕ್ತ ತತ್ತ್ವದಿಂದ ಜನಿಸಿರುವ ಬ್ರಹ್ಮನ ಕಣ್ಣುಗಳಿಗೆ ಕಾಣಿಸಿಕೊಂಡಳು.
(ವಿಷ್ಣುವಿನ, ಇಂದ್ರಿಯಗಳು ಮತ್ತು ಹೃದಯದಲ್ಲಿ ಶಬ್ದ, ಸ್ಪಶ೯, ರೂಪ, ರಸ, ಗಂಧಗಳೆಂಬ ತತ್ತ್ವಗಳನ್ನು ಲೀನವಾಗಿಸಿ ಯೋಗನಿದ್ರೆಯಲ್ಲಿ ಇದ್ದ ಮಹಾಮಾಯೆಯು ಬ್ರಹ್ಮನ ಆತ೯ದನಿಗೆ ತಕ್ಷಣ ತತ್ತತ್ ಇಂದ್ರಿಯಗಳಿಂದ ತತ್ತ್ವರೂಪಿಯಾಗಿ ಹೊರಬಂದು ಅಭಯರೂಪಿಯಾಗಿ ಆವಿಭ೯ವಿಸಿದಳು.)

"ದೃಷ್ಟ್ವೈವ ಕಿಂ ಭವತೀ ಪ್ರಕರೋತಿ ಭಸ್ಮ
ಸವಾ೯ಸುರಾನರಿಷು ಯತ್ಪ್ರಹಿಣೋಷಿ ಶಸ್ತ್ರಮ್ /
ಲೋಕಾನ್ಪ್ರಯಾಂತು ರಿಪವೋsಪಿ ಹಿ ಶಸ್ತ್ರಪೂತಾ
ಇತ್ಥಂ ಮತಿಭ೯ವತಿ ತೇಷ್ವಹಿತೇಷು ಸಾಧ್ವೀ //"
                                       -_೧೯
ದೃಷ್ಟಿ ಮಾತ್ರದಿಂದಲೇ (ಬಿರುನೋಟ) ನೀನು ಎಲ್ಲಾ ಅಸುರರನ್ನು ಏಕೆ ಭಸ್ಮಮಾಡುವುದಿಲ್ಲ? (ಹಾಗೆ ಮಾಡುವ ಶಕ್ತಿಯಿದ್ದರೂ ನೀನು) ಶತ್ರುಗಳಲ್ಲಿ ಶಸ್ತ್ರಪ್ರಹಾರ ಮಾಡಲು ಕಾರಣವಿದೆ. ಶತ್ರುಗಳಾದರೂ ಅವರು ಕೂಡ ನಿನ್ನ ಆಯುಧಗಳಿಂದ ಹತರಾಗಿ ಪವಿತ್ರರಾಗಿ ಉತ್ತಮಲೋಕಗಳನ್ನು ಹೊಂದಲಿ ಎಂಬುದೇ ನಿನ್ನ ಆಶಯ.
ಅಂತಹವರಲ್ಲಿಯೂ ನಿನ್ನ ಕೃಪಾಬುದ್ಧಿಯು ಅತ್ಯಂತ ಸಾಧುವಾದುದು.

"ಖಡ್ಗಪ್ರಭಾನಿಕರವಿಸ್ಪುರಣೈಸ್ತಥೋಗ್ರೈಃ
ಶೂಲಾಗ್ರಕಾಂತಿನಿವಹೇನ ದೃಶೋsಸುರಾಣಾಮ್ /
ಯನ್ನಾಗತಾ ವಿಲಯಮಂಶುಮದಿಂದುಖಂಡ-
ಯೋಗ್ಯಾನನಂ ತವ ವಿಲೋಕಯತಾಂ ತದೇತತ್ // "
                               - _೨೦
ನಿನ್ನ ಖಡ್ಗದಿಂದ ಹೊರಹೊಮ್ಮುತ್ತಿದ್ದ ಉಗ್ರವಾದ ತೇಜೋರಾಶಿಯಿಂದಾಗಲೀ ಅಥವಾ ನಿನ್ನ ಶೂಲಾಗ್ರ ಕಾಂತಿಯಿಂದಾಗಲೀ ಅಸುರರ ಕಣ್ಣುಗಳು ಕುರುಡಾಗದೆ ಇದ್ದದ್ದಕ್ಕೆ, ಅವರು ಅಮೃತಕಿರಣರಂಜಿತವಾದ ನಿನ್ನ ಚಂದ್ರವದನವನ್ನು ನೋಡುತ್ತಿದ್ದದ್ದೇ ಕಾರಣ.

"ಏವಮೇತತ್ ಬಲೀ ಶುಂಭೋ ನಿಶುಂಭಶ್ಚಾಪಿ ತಾದೃಶಃ /
ಕಿಂ ಕರೋಮಿ ಪ್ರತಿಜ್ಞಾ ಮೇ ಯದನಾಲೋಚಿತಾ ಪುರಾ //"
                            - _೧೨೮
ಶುಂಭನು, ಬಲಶಾಲಿಯೆಂಬುದೂ ನಿಶುಂಭನೂ ಅಂತಹವನೇ ಎಂಬುದೂ ನೀ (ದೂತ) ಹೇಳಿದಂತೆಯೇ ಸರಿ.
ಆದರೇನು ಮಾಡಲಿ?
ಏಕೆಂದರೆ ಹಿಂದೆ ನಾನು ಆಲೋಚಿಸದೆ ಪ್ರತಿಜ್ಞೆ ಮಾಡಿಬಿಟ್ಟಿರುವೆನಲ್ಲ ...
(ಪ್ರತಿಜ್ಞೆ ಕೈಗೊಳ್ಳಲ್ಪಟ್ಟರೆ ಪ್ರತಿಜ್ಞೆಗೆ ಪರಿಸರವೂ, ಪರಿಸ್ಥಿತಿಯೂ ಪೂರಕವಾಗಿ ಬರುತ್ತೆ.
ಉದಾಹರಣೆಗೆ - ಕೃಷ್ಣನು ಆಯುಧವನ್ನ ಧರಿಸುವಂತೆ ಮಾಡುತ್ತೇನೆಂಬ ಭೀಷ್ಮನ ಪ್ರತಿಜ್ಞೆ.
ಇಲ್ಲೂ ಹಾಗೆಯೇ,
ಬಲಶಾಲಿರಾಕ್ಷಸ ಸಮೂಹ, ಬಲವನ್ನ ನೂಮ೯ಡಿಗೊಳಿಸುವ (ರಾಕ್ಷಸರು ಪಡಕೊಂಡ) ವರಗಳು... ಆದರೂ "ಕಿಂ ಕರೋಮಿ ಪ್ರತಿಜ್ಞಾ ಮೇ ಯದನಾಲೋಚಿತಾ ಪುರಾ")
"ಬಲಾವಲೇಪದುಷ್ಟೇ ತ್ವಂ ಮಾ ದುಗೇ೯ ಗವ೯ಮಾವಹ /
ಅನ್ಯಾಸಾಂ ಬಲಮಾಶ್ರಿತ್ಯ ಯುದ್ಧ್ಯಸೇ ಚಾತಿಮಾನಿನೀ //"
                           - ೧೦_
(ಶುಂಭನು ಕೋಪದಿಂದ) ಬಲದಿಂದ ಮದಿಸಿರುವ ದುಷ್ಟೆಯಾದ ದುಗೆ೯ಯೇ! ಗವ೯ವನ್ನು ಹೊಂದದಿರು! ನೀನು ಅತಿಯಾದ ಅಭಿಮಾನವುಳ್ಳವಳು! (ಆದರೂ) ಇತರರ ಬಲವನ್ನಾಶ್ರಯಿಸಿ ಯುದ್ಧಮಾಡುತ್ತಿರುವೆ.
( ಶುಂಭನ ಮಾತನ್ನ ಕೇಳಿದಾಗ ಸಾಮಾನ್ಯರಾದರೋ ಒಂದು ಹೆಜ್ಜೆ ಹಿಂದಿಡಲೇಬೇಕು. ಅತಿಶಯಪ್ರಾಬಲ್ಯ, ವರವಿಶೇಷಗಳನ್ನ ಪಡೆದುಕೊಂಡವರಲ್ಲವೇ, ಅದರೊಟ್ಟಿಗೆ ಅಹಂಭಾವ... {ಪ್ರತಿನಾಯಕ, ಪ್ರಬಲವಾದಷ್ಟೂ ನಾಯಕನ ಸಾಮಥ್ಯ೯ ಪ್ರಕಟಗೊಳ್ಳುವಂತದ್ದು.
ಅದಕ್ಕೆ ಏನೋ ಕಾವ್ಯಗಳಲ್ಲಿ ಸ್ವಲ್ಪ ಹೆಚ್ಚೆನಿಸುವಷ್ಟು ಪ್ರತಿನಾಯಕನ ಪ್ರಾಬಲ್ಯ ವೈಭವೀಕರಣವನ್ನ ಕಾಣಬಹುದು.}

"ಏಕೈವಾಹಂ ಜಗತ್ಯತ್ರ ದ್ವಿತೀಯಾ ಕಾ ಮಮಾಪರಾ /
ಪಶ್ಯೈತಾ ದುಷ್ಟ ಮಯ್ಯೇವ ವಿಶಂತ್ಯೋ ಮದ್ವಿಭೂತಯಃ //"
                              - ೧೦_
(ದೇವಿಯ ಪ್ರತ್ಯುತ್ತರ) ಜಗತ್ತಿನಲ್ಲಿ ನಾನೊಬ್ಬಳೇ ಇರುವವಳು. ನನಗೆ ಎರಡನೆಯದಾಗಿ ಯಾರಿದ್ದಾಳೆ? ಎಲೈ ದುಷ್ಟನೇ! ನನ್ನ ಮಹಿಮಾಶಕ್ತಿಗಳೆಲ್ಲವೂ ನನ್ನಲ್ಲಿಯೇ ಪ್ರವೇಶಿಸುವುದನ್ನು ನೋಡು!!!!!.

ಕೊನೆಗೆ ಲೋಕೋತ್ತರ ಆಶಯ
"ವರದಾಹಂ ಸುರಗಣಾ ವರಂ ಯಂ ಮನಸೇಚ್ಛಥ /
ತಂ ವೃಣುಧ್ವಂ ಪ್ರಯಚ್ಛಾಮಿ ಜಗತಾಮುಪಕಾರಕಮ್ //"
                          ೧೧_೩೭
ನಾನು ವರದಾತೃ, (ಎಂದು ನೀವು ಸ್ತುತಿಸಿದ್ದು ಸರಿಯಾದದ್ದು) ಎಲೈ ದೇವತೆಗಳೇ, ಜಗತ್ತಿಗೆ ಉಪಕಾರವನ್ನು ಮಾಡುವ ಯಾವ ವರವನ್ನಾದರೂ ಮನಸ್ಸಿನಿಂದ ಇಚ್ಛಿಸಿದರೆ ಅದನ್ನು ಕೇಳಿರಿ, ಕೊಡುತ್ತೇನೆ!.
           ಹೇ ಸದಾssದ್ರ೯ಚಿತ್ತಾ sssss                                                          - ರವೀಂದ್ರ ಅತ್ತೂರು

ಹರಿಯಣ್ಣ ,
ನಾಟ್ಯಶಾಸ್ತ್ರದ ಕೊನೆಗೆ ಹೇಳಲ್ಪಟ್ಟ ಶ್ಲೋಕವೆಂದು ಹೇಳಿಲ್ಲ.

" ಶಕ್ಯಂ ಹಿ ಲೋಕಸ್ಯ ಸ್ಥಾವರಸ್ಯ ಚರಸ್ಯ /
ಶಾಸ್ತ್ರೇಣ ನಿಣ೯ಯಂ ಕರ್ತುಂ ಭಾವ- ಚೇಷ್ಟಾ ವಿಧಿಂ ಪೃತಿ //
ನಾನಾಶೀಲಾಃ ಪ್ರಕೃತಯಃ ಶೀಲೇ ನಾಟ್ಯಂ ಪ್ರತಿಷ್ಠಿತಂ /
ತಸ್ಮಾಲ್ಲೋಕಪ್ರಮಾಣಂ ಹಿ ಕತ೯ವ್ಯಂ ನಾಟ್ಯಯೋಕ್ತೃಭಿಃ //"

"ಸ್ವಭಾವಭಾವೋಪಗತಂ ಶುದ್ಧಂ ತ್ವವಿಕೃತಂ ತಥಾ /
ಲೋಕವಾತಾ೯ಕ್ರಿಯೋಪೇತಮಂಗಲೀಲಾವಿವಜಿ೯ತಂ //
ಸ್ವಭಾವಾಭಿನಯೋಪೇತಂ ನಾನಾಸ್ತ್ರೀಪುರುಷಾಶ್ರಯಂ /
ಯದೀದೃಶಂ ಭವೇನ್ನಾಟ್ಯಂ ಲೋಕಧಮೀ೯ತು ಸಾ ಸ್ಮೃತಾ //"

ಜನರ ನಡೆ - ನುಡಿ - ಕೃತಿಗಳನ್ನು ಇದ್ದಂತೆಯೇ, ಚಲನವಲನಗಳನ್ನು ಯಾವ ರೀತಿಯೂ ಬದಲಾಯಿಸದೆ, ವೇಷಭೂಷಣಗಳೂ ದಿನನಿತ್ಯದಲ್ಲಿಯಂತೆ, ಗಂಡಸರು - ಹೆಂಗಸರೊಡಗೂಡಿ ವ್ಯವಹಾರದಲ್ಲಿದ್ದಂತೆ- ರೀತಿಯ ಪ್ರದಶ೯ನಕ್ಕೆ ಲೋಕಧಮೀ೯ ಎನ್ನುತ್ತಾರೆ.

"ಅತಿವಾಕ್ಯಕ್ರಿಯೋಪೇತಮತಿಸತ್ವಾತಿಭಾಷಿತಮ್ /
ಲೀಲಾಂಗಹಾರಾಭಿನಯಂ ನಾಟ್ಯಲಕ್ಷಣಲಕ್ಷಿತಂ //
ಲೋಕೇ ಪ್ರಸಿದ್ಧಂ ದ್ರವ್ಯಂ ತು ಯದಾ ನಾಟ್ಯೇ ಪ್ರಯುಜ್ಯತೇ /
ಯದೀದೃಶಂ ಭವೇನ್ನಾಟ್ಯಂ ನಾಟ್ಯಧಮೀ೯ತು ಸಾಸ್ಮೃತಾ //"

ಉದ್ದುದ್ದವಾಕ್ಯ, ಅದ್ಭುತಕ್ರಿಯೆ, ಆವೇಶಾತಿಶಯ, ಆಲಂಕಾರಿಕ ಭಾಷೆ, ನಯವಾದ ಚಲನವಲನಗಳು, ನೃತ್ಯ, ಲೋಕಪ್ರಸಿದ್ಧವಾದ ವಸ್ತು ಇದಿದ್ದಲ್ಲಿ ಅದನ್ನು ನಾಟ್ಯಧಮೀ೯ ಎನ್ನುತ್ತಾರೆ.

ಇಲ್ಲಿ "ಅತಿವಾಕ್ಯ" -
ದೇವೀಮಾತ್ಮ್ಯೆಯಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾದಸರಣಿಯನ್ನ,
"ಆವೇಶಾತಿಶಯ" -
ದೇವಿಯು, ದೇವತೆಗಳಿಂದ ತೇಜಸ್ಸನ್ನೂ, ಆಯುಧವನ್ನೂ ಒಳದುಂಬಿಸಿಕೊಂಡು - ಧರಿಸಿ ತದನಂತರದ ಸ್ಥಿತಿ,
ಇನ್ನು ಪ್ರಧಾನವಾಗಿ, ಪಾತ್ರಧಾರಿಗಳಾಗಿ ಪುರುಷರೇ ಭಾಗವಹಿಸುವಿಕೆ (ಗಂಡುಕಲೆ)
ಇದನ್ನೆಲ್ಲಾ ನೋಡುವಾಗ ಯಕ್ಷಗಾನವೆಂಬುದು ನಾಟ್ಯಧಮೀ೯ ಎಂಬುವುದು ಮನನವಾಗದಿರದು.

ಇನ್ನು,
"ಪ್ರಯೋಗಶರಣಾಃ ವೈಯಾಕರಣಾಃ" ಎಂದು ಕೊನೆಗೆ ಹೇಳಿದರೂ ಮಾನುಷೀಪ್ರಯೋಗಕ್ಕೆ ಸರಿಯಾಗಿ ಸೂತ್ರವಿರುವುದು ಸತ್ಯವಷ್ಟೇ.
ಸೋದಾಹರಣೆಗೆ
"ಅಕುಹವಿಸಗ೯ನೀಯಾನಾಂ ಕಂಠಃ"... ಎಂದು ಹೇಳುವಲ್ಲಿ ವೈಯಾಕರಣ, ಸ್ಥಾನ ನಿದೇ೯ಶಿಸುವ ಮೊದಲೂ ಉಚ್ಛಾರಣೆಯು ಆಯಾಯ ಸ್ಥಾನದಲ್ಲೇ ಆಗುತ್ತಿದ್ದಲ್ಲವೇ... ( ನಿಯಮವನ್ನ ನನ್ನ ಬೆಂಬಲಕ್ಕಾಗಿ ತೆಗೆದುಕೊಂಡೆನೆಯೇ ಹೊರತು ವ್ಯಾಕರಣಶಾಸ್ತ್ರವೇ ರೀತಿ ಉಂಟೆಂದು ಹೇಳ್ತಾ ಇಲ್ಲ)
ಪಾಣಿನಿಯ ಶೀಕ್ಷಾದಲ್ಲಿ ರಂಗವಣ೯ದ ಉಚ್ಚಾರಣೆಗೆ
"ಯಥಾ ಸೌರಾಷ್ಟ್ರಿಕಾನಾರೀ ತಂಕ್ರಾ ಇತ್ಯಭಿಭಾಷತೇ /
ತಥಾ ರಂಗಾಪ್ರಯೋಕ್ತವ್ಯಾಃ" ಖೇ ಅರಾ ಇವ ಖೇದಯಃ // "
ಎಂದು ವೇದಮಂತ್ರದ ಉಚ್ಛಾರಣೆಗೂ ಜನಪದರೂಢಿಯಲ್ಲಿರುವ ಉಚ್ಛಾರಣಾಕ್ರಮವನ್ನೇ ನಿದೇ೯ಶಿಸಿದ್ದಾನೆ.

ದೇವೀಮಾಹಾತ್ಮ್ಯೆಯಲ್ಲಿ
ಈಗ ಚಚಿ೯ತ ವಿಷಯ ದೇವಿಯ ನಡುಕ ಮಾತ್ರವಾದ್ದರಿಂದ ಪೂತಿ೯ ಪ್ರಸಂಗವೇ ಬಾಧಿಸಲ್ಪಂಟಂತೆ ಯಾಕೆ ದಿಟ್ಟಿಸುತ್ತೀರಿ ಹರಿಯಣ್ಣssssssssssssss???

ಉಪಸಂಹಾರ -
ನಮ್ಮ ಕಟೀಲಿನ ಮೇಳಗಳ ಪ್ರದಶ೯ನ ಕಾಣುವಂತದ್ದು
ಸೇವಾರೂಪದಲ್ಲಿ.
ಶಾಸ್ತ್ರೀಯಭಾವ ಒಂದು ಬದಿಗಿಟ್ಟು ಸೇವಾಥಿ೯ಯ ಭಾವವನ್ನ (ಪರವಶತೆ) ಒಳದುಂಬಿಸಿಕೊಂಡಲ್ಲಿ ನಮಗೂ ಅಭಿನಯ ಅಸಹ್ಯವಾದೀತೇ......


ಹೀಗೆ ಹಲವಾರು ವಿಚಾರಗಳು ನನಗೆ ಸವಾಲುಗಳಾಗಿ ಬಂದವು. ನವರಾತ್ರಿ, ಮಕ್ಕಳಮೇಳದ ವಾರ್ಷಿಕ ಕಲಾಪರ್ವ, ರಂಗನಾಯಕ ಕುರಿಯ ಇವುಗಳೊಂದಿಗೆ ದೇವಳದ ಸ್ವಲ್ಪಮಟ್ಟಿನ ಹೊಣೆಗಾರಿಕೆ ಸ್ವಾಭಿಪ್ರಾಯಕ್ಕೆ ವಿಲಂಬವನ್ನು ಕಾಣಿಸಿತು. ಕ್ಷಮಿಸಿ. ಈಗ ಸ್ವಾಭಿಪ್ರಾಯಕ್ಕೆ ತೊಡಗುತ್ತಿದ್ದೇನೆ. ಅದಕ್ಕಾಗಿ ಹರಸಿ

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
            Vidwan Sriharinarayanadasa Asranna, Kateelu

No comments:

Post a Comment