Thursday 4 February 2016

ಯಕ್ಷಗಾನದಲ್ಲಿ ದೇವಿ ಭಾಗ 3

ಯಕ್ಷಗಾನದ ದೇವಿಯ ದರ್ಶನದ ಬಗ್ಗೆ ವೇದಿಕೆಯಲ್ಲಿ ಚರ್ಚೆಯಾದಷ್ಟು ಯಾವ ವೇದಿಕೆಯಲ್ಲೂ ಚರ್ಚೆಯಾಗಿಲ್ಲ. ಅದರ ಅರ್ಥ ವೇದಿಕೆಯಲ್ಲಿ ವಿರುದ್ಧ ಮತಿಗಳ ಸಂಖ್ಯೆ ಹೆಚ್ಚೆಂದು ಅರ್ಥವಲ್ಲ. ತತ್ವಬೋಧದ ಅರಸುವಿಕೆಯಲ್ಲಿ ಎಲ್ಲರೂ ಉತ್ಸುಕರೆಂದೇ ತಿಳಿಯೋಣ.
ದರ್ಶನದ ಬಗ್ಗೆ ಮೊದಲು ಕಾವ್ಯಶಾಸ್ತ್ರಜ್ಞರ ಮತ ತಿಳಿಯೋಣ. ಅತ್ತೂರು ರವೀಂದ್ರ ಭಟ್ರ ವಾದವನ್ನು ವಿಮರ್ಶಿಸೋಣ. ನಾಲ್ಕು ಅಭಿನಯಗಳು. ವಾಚಿಕ, ಆಂಗಿಕ, ಆಹಾರ್ಯ, ಸಾತ್ತ್ವಿಕಗಳೆಂಬುದು. ಇವುಗಳಿಂದ ಕೂಡಿದ ದೃಶ್ಯಕಾವ್ಯ ಒಟ್ಟಂದದಲ್ಲಿ ಸುಂದರವೆನಿಸುತ್ತದೆ. ಆದರೆ ಅವುಗಳ ಪ್ರಮಾಣ ಎಷ್ಟು ಅನ್ನುವುದು ಅತೀ ಮುಖ್ಯ. ಅದನ್ನು ಯಕ್ಷಗಾನದಲ್ಲಿ ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎನ್ನುವುದೂ ಮುಖ್ಯವೆಂದು ಕಾಣುತ್ತದೆ.
ಸಾತ್ತ್ವಿಕ ಎನ್ನುವುದು ಆಂಗಿಕ, ಆಹಾರ್ಯ, ವಾಚಿಕಗಳಲ್ಲಿ ಬೆರೆತಿರುವ ವಸ್ತು. ಆದ್ದರಿಂದಲೇ ಇಂತಹ ಪಾತ್ರಗಳಿಗೆ ಇಂತಹ ವೇಷಭೂಷಣ ಎನ್ನುವ ನಿಯಮವಿದೆ. ಉದಾಹರಣೆಗೆ ಕಿರೀಟವೇಷಗಳು. ದೇವೇಂದ್ರನಿಗೆ ಯಾ ಇತರ ಕಿರೀಟವೇಷದಲ್ಲಿ ಬರುವ ದೇವತೆಗಳಿಗೆ ಹಸಿರು ಬಣ್ಣದ ಇಜಾರು, ಬಾಲ್ಮುಂಡು, ಅಂಗಿ, ಸೊಗವಲ್ಲಿ... ಹೀಗೆ ನಿಯಮವಾದರೆ ಇತರ ಸಾಧು ಸ್ವಭಾವದ ಕಿರೀಟವೇಷಗಳಿಗೆ ಕೆಂಪುಬಣ್ಣದ್ದು. ಹಾಗೆಯೇ ಖಳಸ್ವಭಾವದ ಕಿರೀಟವೇಷಗಳಿಗೆ ಕಪ್ಪು. ಕ್ರಮದಿಂದ ಕರ್ಣ ಯಾರು, ಅರ್ಜುನ ಯಾರು ಎಂದು ರಂಗದಲ್ಲಿ ಶ್ರೀಸಾಮಾನ್ಯನಿಗೂ ತಿಳಿಯಲಾಗುತ್ತದೆ. ಇದನ್ನು ತಿಳಿಯಲು ಮುಖದ ಬಣ್ಣಗಾರಿಕೆಯೂ ಇದೇ ರೀತಿಯ ಕೆಲಸ ಮಾಡುತ್ತದೆ. ಕಲ್ಪನೆಯೇ ಸಾತ್ತ್ವಿಕ ಎನಿಸುತ್ತದೆ.
ಇನ್ನು ಆಂಗಿಕ. ರಾಮ, ನಳನಂತಹ ಪಾತ್ರಗಳು ಹೆಚ್ಚು ಕುಣಿಯಬಾರದು. ಪ್ರಬುದ್ಧವಾದ ಗಂಭೀರವಾದ ಹೆಜ್ಜೆಗಳೇ ಅವರಿಗೆ ಗುಣ. ಹಾಗೆಂದು ಎಷ್ಟೇ ಮೈದುಂಬಿಸಿ ಬಂದ ಮಹಿಷಾಸುರನಂತಹ ಪಾತ್ರಗಳು, ಹಿರಣ್ಯಾಕ್ಷ, ಇಂದ್ರಜಿತುವಿನಂತಹ ಪಾತ್ರಗಳು ಕುಣಿಯಲೇಬೇಕು. ಅವರದ್ದು ಅದೇ ಸಾತ್ತ್ವಿಕ ಅಭಿನಯ.
ಇನ್ನು ವಾಚಿಕ. ವಾಗಭಿನಯ ಎನ್ನುವುದು ಭಾವಾಭಿವ್ಯಕ್ತಿಗೆ ಅತ್ಯಂತ ಸೂಕ್ತಮಾಧ್ಯಮ. ಹಾಗಿದ್ದಲ್ಲಿಯೂ ಇಲ್ಲಿಯೂ ಸಾತ್ತ್ವಿಕವಾದದ್ದೇ ಪಾರಮ್ಯವನ್ನು ಹೊಂದುತ್ತದೆ. ರಾಮನಂತಹ ಧೀರೋದಾತ್ತ ನಾಯಕ ಮಿತಭಾಷಿಯೇ ಆಗಿರಬೇಕು. ಹಾಸ್ಯಪ್ರವೃತ್ತಿ ಅವನಿಗೆ ಸಲ್ಲ. ದೇವಿಯ ವಾಕ್ಯ ಸೂತ್ರಪ್ರಾಯವಾಗಿರಬೇಕು. ಹಾಗೆಂದು ಕೃಷ್ಣ ಹಾಸ್ಯದಲ್ಲಿ ತೊಡಗಬಹುದು. ಸ್ತ್ರೀಯರು ಸಂಸ್ಕೃತಭೂಯಿಷ್ಠ ವಾಕ್ಯಗಳನ್ನು ಬಳಸಕೂಡದು. ರಾಜ ಪ್ರಬುದ್ಧ ಶೈಲಿಯಲ್ಲೇ ವ್ಯವಹರಿಸಬೇಕು, ಹಾಸ್ಯಗಾರ ಗ್ರಾಮ್ಯ ಯಾ ಸಾಮಾನ್ಯಕ್ಕಿಂತಲೂ ಕೆಳಮಟ್ಟದ ಶೈಲಿಯಲ್ಲಿ ಯಾ ತಪ್ಪುತಪ್ಪಾಗಿ ಭಾಷಾ ಸಾಂಕರ್ಯವೂ ಇರುವಂತೆ ಮಾತನಾಡಬೇಕು.... ಹೀಗೆ ಹಲವಾರು ನಿಯಮಗಳು ಹೇಳಲ್ಪಟ್ಟಿವೆ; ನಮಗೂ ಅನುಭವೇನ ವೇದ್ಯವಾಗುವವುಗಳೇ. ಹೀಗೆ ಸಾತ್ತ್ವಿಕ ಅನ್ನುವುದು ಇತರ ಮೂರೂ ಪ್ರಕಾರಗಳ ಅಭಿನಯಗಳಲ್ಲಿ ಒಳಹೊಕ್ಕು ತನ್ನ ಪ್ರಭುತ್ವದಿಂದಲೇ ರಸದ ಉತ್ಕರ್ಷಾಪಕರ್ಷಕ್ಕೆ ಹೇತುವಾಗುತ್ತದೆ.
 ಇನ್ನೊಂದು ವಿಚಾರ. ಯಕ್ಷಗಾನವು ಭಾರತದ ಇತರ ಕಲಾಪ್ರಕಾರಗಳಿಗಿಂತ ತೀರಾ ಭಿನ್ನವಾದದ್ದು. ಇತರ ಕಡೆಗಳಲ್ಲಿ ಆಂಗಿಕವಾದ ಅಭಿನಯವೇ ಕೆಲವೊಮ್ಮೆ ವಾಚಿಕವನ್ನು ತುಂಬುತ್ತದೆ ಅಥವಾ ಕೆಲವೊಮ್ಮೆ ಎರಡೂ ಏಕಕಾಲದಲ್ಲಿ ಆಗಲ್ಪಡುತ್ತದೆ. ಉದಾಹರಣೆಗೆ ಸಂಸ್ಕೃತ ನಾಟಕಗಳಲ್ಲಿ ಗದ್ಯದ ಮಾತು ವಾಚಿಕವಾಗಿರುತ್ತದೆ. ಅವುಗಳೊಡನೆ ಪದ್ಯಗಳೂ ಮಧ್ಯೆ ಇರುವುದನ್ನು ನಾವು ಕಾಣಬಹುದು. ಸಂದರ್ಭದಲ್ಲಿ ಅದನ್ನು ನಟ ಯಾ ನೇಪಥ್ಯದಲ್ಲಿ ಬೇರೆ ಯಾರೇ ಹಾಡಲಿ, ಅದಕ್ಕೆ ಪುನಃ ವಿವರಣಾತ್ಮಕ ಅರ್ಥ ಇರುವುದಿಲ್ಲ. ಅದೇ ಸಂಗೀತದೊಂದಿಗಿನ ಅವನ ಅಭಿನಯ ವಾಚಿಕವೆಂದು ಪರಿಗಣಿಸಲ್ಪಡುತ್ತದೆ. ಆದರೆ ಯಕ್ಷಗಾನದಲ್ಲಿ ಹಾಗಲ್ಲ. ಪ್ರಸಂಗದ ಪದ್ಯವು ಭಾಗವತರಿಂದ ಹಾಡಲ್ಪಡುವಾಗ ನೃತ್ಯಪ್ರಧಾನವಾದ ಆಂಗಿಕ ಅಭಿನಯ ಇರುತ್ತದೆ. ಅನಂತರ ವಾಚಿಕ ಯಥಾಪ್ರಕಾರ, ಕೆಲವೊಮ್ಮೆ ಆಂಗಿಕವು ಸ್ವಲ್ಪ ಹೆಚ್ಚೇ ಅಭಿನಯಿಸಲ್ಪಪಡುತ್ತದೆ. ಇಂತಹ ಸಂದರ್ಭದಲ್ಲಿ ವಾಚಿಕವನ್ನು ಎಷ್ಟರಮಟ್ಟಿಗೆ ಕಾಣಿಸಬಹುದು ಎನ್ನುವುದೂ ವಿಚಾರಾರ್ಹ. ಕೆಲವೊಮ್ಮೆ ವಾಚಿಕವು ಪುನಃ ಅಷ್ಟೇ ವಿಸ್ತಾರವಾಗುವುದರಿಂದ ಆಂಗಿಕಾಭಿನಯಕ್ಕೆ ಅಷ್ಟೇ ಪ್ರಾಧಾನ್ಯ ಕೊಟ್ಟಲ್ಲಿ ಎರಡೂ ಪ್ರತ್ಯೇಕವಾಗಿ ಸಹೃದಯನಿಗೆ ವೇದ್ಯವಾಗುವುದರಿಂದ ರಸದ ಅಪಕರ್ಷಕ್ಕೆ ಹೇತುವಾಗುತ್ತದೆ ಎನ್ನುವ ವಾದವನ್ನೂ ಅಲ್ಲಗಳೆಯಲಾಗದು. ಆದ್ದರಿಂದಲೇ ಭರತನಾಟ್ಯದ ಕಲಾವಿದರು ಪದ್ಯದ ಒಂದೊಂದು ಸೊಲ್ಲನ್ನು ಹಲವಾರು ಭಾರಿ ಪುನರಾವರ್ತನೆ ಮಾಡಿ ಅವರಿಗೆ ತೋಚಿದ ಎಲ್ಲಾ ಭಾವಗಳನ್ನು ಆಂಗಿಕದ ಮೂಲಕವೇ ಜನಮಾನಸಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಾರೆ. ಅಷ್ಟು ಪುನರಾವರ್ತನೆ ಯಕ್ಷಗಾನದಲ್ಲಿ ಕಾಣಲಾರೆವು. ಕಾಣಬಾರದು ಕೂಡ.
ಏನೇ ಇರಲಿ. ಪ್ರಕೃತಕ್ಕೆ ಬರೋಣ. ದರ್ಶನದ ವಿಚಾರಕ್ಕೆ ವಿದ್ವಾಂಸರ ಪೂರ್ವಪಕ್ಷಕ್ಕೆ ಬರೋಣ. ಮೊದಲಾಗಿ ಅತ್ತೂರು ರವೀಂದ್ರ ಭಟ್ಟರ ಪೂರ್ವಪಕ್ಷ.
"ಹರಿಯಣ್ಣ,

" ಶಕ್ಯಂ ಹಿ ಲೋಕಸ್ಯ ಸ್ಥಾವರಸ್ಯ ಚರಸ್ಯ /
ಶಾಸ್ತ್ರೇಣ ನಿಣ೯ಯಂ ಕರ್ತುಂ ಭಾವ- ಚೇಷ್ಟಾ ವಿಧಿಂ ಪೃತಿ //
ನಾನಾಶೀಲಾಃ ಪ್ರಕೃತಯಃ ಶೀಲೇ ನಾಟ್ಯಂ ಪ್ರತಿಷ್ಠಿತಂ  /
ತಸ್ಮಾಲ್ಲೋಕಪ್ರಮಾಣಂ ಹಿ ಕತ೯ವ್ಯಂ ನಾಟ್ಯಯೋಕ್ತೃಭಿಃ //"

"ಸ್ವಭಾವಭಾವೋಪಗತಂ ಶುದ್ಧಂ ತ್ವವಿಕೃತಂ ತಥಾ /
ಲೋಕವಾತಾ೯ಕ್ರಿಯೋಪೇತಮಂಗಲೀಲಾವಿವಜಿ೯ತಂ //
ಸ್ವಭಾವಾಭಿನಯೋಪೇತಂ ನಾನಾಸ್ತ್ರೀಪುರುಷಾಶ್ರಯಂ /
ಯದೀದೃಶಂ ಭವೇನ್ನಾಟ್ಯಂ ಲೋಕಧಮೀ೯ತು ಸಾ ಸ್ಮೃತಾ //"

ಜನರ ನಡೆ-ನುಡಿ-ಕೃತಿಗಳನ್ನು ಇದ್ದಂತೆಯೇ, ಚಲನವಲನಗಳನ್ನು ಯಾವ ರೀತಿಯೂ ಬದಲಾಯಿಸದೆ, ವೇಷಭೂಷಣಗಳೂ ದಿನನಿತ್ಯದಲ್ಲಿಯಂತೆ, ಗಂಡಸರು-ಹೆಂಗಸರೊಡಗೂಡಿ ವ್ಯವಹಾರದಲ್ಲಿದ್ದಂತೆ- ರೀತಿಯ ಪ್ರದಶ೯ನಕ್ಕೆ ಲೋಕಧಮೀ೯ ಎನ್ನುತ್ತಾರೆ .

"ಅತಿವಾಕ್ಯಕ್ರಿಯೋಪೇತಮತಿಸತ್ವಾತಿಭಾಷಿತಮ್ /
ಲೀಲಾಂಗಹಾರಾಭಿನಯಂ ನಾಟ್ಯಲಕ್ಷಣಲಕ್ಷಿತಂ //
ಲೋಕೇ ಪ್ರಸಿದ್ಧಂ ದ್ರವ್ಯಂ ತು ಯದಾ ನಾಟ್ಯೇ ಪ್ರಯುಜ್ಯತೇ /
ಯದೀದೃಶಂ ಭವೇನ್ನಾಟ್ಯಂ ನಾಟ್ಯಧಮೀ೯ತು ಸಾಸ್ಮೃತಾ //"

ಉದ್ದುದ್ದವಾಕ್ಯ, ಅದ್ಭುತಕ್ರಿಯೆ, ಆವೇಶಾತಿಶಯ, ಆಲಂಕಾರಿಕ ಭಾಷೆ, ನಯವಾದ ಚಲನವಲನಗಳು, ನೃತ್ಯ, ಲೋಕಪ್ರಸಿದ್ಧವಾದ ವಸ್ತು ಇದಿದ್ದಲ್ಲಿ ಅದನ್ನು ನಾಟ್ಯಧಮೀ೯ ಎನ್ನುತ್ತಾರೆ.

ಇಲ್ಲಿ "ಅತಿವಾಕ್ಯ" -
ದೇವೀಮಾಹಾತ್ಮ್ಯೆಯಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾದಸರಣಿಯನ್ನ,
"ಆವೇಶಾತಿಶಯ" -
ದೇವಿಯು, ದೇವತೆಗಳಿಂದ ತೇಜಸ್ಸನ್ನೂ, ಆಯುಧವನ್ನೂ ಒಳದುಂಬಿಸಿಕೊಂಡು - ಧರಿಸಿ ತದನಂತರದ ಸ್ಥಿತಿ,
ಇನ್ನು ಪ್ರಧಾನವಾಗಿ, ಪಾತ್ರಧಾರಿಗಳಾಗಿ ಪುರುಷರೇ ಭಾಗವಹಿಸುವಿಕೆ (ಗಂಡುಕಲೆ)
ಇದನ್ನೆಲ್ಲಾ ನೋಡುವಾಗ ಯಕ್ಷಗಾನವೆಂಬುದು ನಾಟ್ಯಧಮೀ೯ ಎಂಬುವುದು ಮನನವಾಗದಿರದು.

ಇನ್ನು,
"ಪ್ರಯೋಗಶರಣಾಃ ವೈಯಾಕರಣಾಃ" ಎಂದು ಕೊನೆಗೆ ಹೇಳಿದರೂ ಮಾನುಷೀಪ್ರಯೋಗಕ್ಕೆ ಸರಿಯಾಗಿ ಸೂತ್ರವಿರುವುದು ಸತ್ಯವಷ್ಟೇ.
ಸೋದಾಹರಣೆಗೆ
"ಅಕುಹವಿಸಗ೯ನೀಯಾನಾಂ ಕಂಠಃ"... ಎಂದು ಹೇಳುವಲ್ಲಿ ವೈಯಾಕರಣ, ಸ್ಥಾನನಿದೇ೯ಶಿಸುವ ಮೊದಲೂ ಉಚ್ಛಾರಣೆಯು ಆಯಾಯ ಸ್ಥಾನದಲ್ಲೇ ಆಗುತ್ತಿದ್ದದ್ದಲ್ಲವೇ.... ( ನಿಯಮವನ್ನ ನನ್ನ ಬೆಂಬಲಕ್ಕಾಗಿ ತೆಗೆದುಕೊಂಡೆನೆಯೇ ಹೊರತು ವ್ಯಾಕರಣಶಾಸ್ತ್ರವೇ ರೀತಿ ಉಂಟೆಂದು ಹೇಳ್ತಾ ಇಲ್ಲ)
ಪಾಣಿನಿಯ ಶಿಕ್ಷಾದಲ್ಲಿ ರಂಗವಣ೯ದ ಉಚ್ಚಾರಣೆಗೆ
"ಯಥಾ ಸೌರಾಷ್ಟ್ರಿಕಾನಾರೀ ತಂಕ್ರಾ ಇತ್ಯಭಿಭಾಷತೇ /
ತಥಾ ರಂಗಾಪ್ರಯೋಕ್ತವ್ಯಾಃ "ಖೇ ಅರಾ ಇವ ಖೇದಯಃ"//"
ಎಂದು ವೇದಮಂತ್ರದ ಉಚ್ಛಾರಣೆಗೂ ಜನಪದರೂಢಿಯಲ್ಲಿರುವ ಉಚ್ಛಾರಣಾಕ್ರಮವನ್ನೇ ನಿದೇ೯ಶಿಸಿದ್ದಾನೆ.

ದೇವೀ ಮಾಹಾತ್ಮ್ಯೆಯಲ್ಲಿ
ಈಗ ಚಚಿ೯ತ ವಿಷಯ ದೇವಿಯ ನಡುಕ ಮಾತ್ರವಾದ್ದರಿಂದ ಪೂತಿ೯ ಪ್ರಸಂಗವೇ ಬಾಧಿಸಲ್ಪಟ್ಟಂತೆ ಯಾಕೆ ದಿಟ್ಟಿಸುತ್ತೀರಿ ಹರಿಯಣ್ಣssssssssssssss???

ಉಪಸಂಹಾರ -
ನಮ್ಮ ಕಟೀಲಿನ ಮೇಳಗಳ ಪ್ರದಶ೯ನ ಕಾಣುವಂತದ್ದು ಸೇವಾರೂಪದಲ್ಲಿ.
ಶಾಸ್ತ್ರೀಯಭಾವ ಒಂದು ಬದಿಗಿಟ್ಟು ಸೇವಾಥಿ೯ಯ ಭಾವವನ್ನ (ಪರವಶತೆ) ಒಳದುಂಬಿಸಿಕೊಂಡಲ್ಲಿ ನಮಗೂ ಅಭಿನಯ ಅಸಹ್ಯವಾದೀತೇ....."
"ಹರಿಯಣ್ಣ,
ಯಕ್ಷಗಾನವು ಎಲ್ಲಾ ವಗ೯ಪ್ರೇಕ್ಷಕರಿಗೂ ಕಲಾನುಭೂತಿಯನ್ನ ಕೊಡುವುದರಿಂದ ಅದನ್ನು ಪೂತಿ೯ಶಾಸ್ತ್ರ ದೃಷ್ಟಿಯಲ್ಲಿ ನೋಡದೆ (ಎಲ್ಲಾ ಕಲಾಪ್ರಾಕಾರಗಳೂ ನಾಟ್ಯಶಾಸ್ತ್ರದ ಜೊತೆಗೆ ಆಯಾಯ ಪ್ರಾದೇಶಿಕ ಜನಪದೀಯ ವೈಶಿಷ್ಟ್ಯಗಳನ್ನ ಮೈಗೂಡಿಸಿಕೊಂಡೇ ಬೆಳೆದದ್ದಲ್ಲವೇ) ಶಾಸ್ತ್ರದ ಪರಿಧಿಯಲ್ಲಿ ಇರುವ ಸ್ವಾತಂತ್ರ್ಯವನ್ನ ಬಳಸಿಕೊಂಡು ತಳಮಟ್ಟದ ಪ್ರೇಕ್ಷಕನಿಗೂ ನ್ಯಾಯ ಒದಗಿಸಬೇಕೆಂಬುವುದೇ ಸ್ವಾಭಿಪ್ರಾಯ".
ನನಗೆ ಬಂದ ಅತಿದೊಡ್ಡ ಪೂರ್ವಪಕ್ಷ ರವಿಯಣ್ಣನದ್ದೇ. ಅವರೇ ಅಂದಂತೆ ಪೂರ್ವಪಕ್ಷದ ಅಭಾವ ಯಾ ಭಾರರಾಹಿತ್ಯ ಸಿದ್ಧಾಂತಿಗೆ ದುಃಖದಾಯಕವೇ ಹೌದಾದರೂ ಇಂತಹ ಬಲವಾದ ಪೂರ್ವಪಕ್ಷಕ್ಕೆ ನನ್ನ ಅಲ್ಪಮತಿಯು ರೀತಿ ಉತ್ತರಕ್ಕಾಗಿ ಪ್ರಯತ್ನಿಸುತ್ತಿದೆ.
ನಡುಕಕ್ಕೆ ಕಾರಣ ಹಲವಾರು. ಜ್ವರ, ಚಳಿ, ಕ್ರೋಧ, ಪರಕಾಯಪ್ರವೇಶ (ಕೋಲ, ನಾಗದರ್ಶನದಂತೆ). ಮೊದಲೆರಡು ವಿಚಾರದಲ್ಲಿ ಅಪ್ರಸ್ತುತ.
ಕ್ರೋಧದಿಂದ ನಡುಕ ಎನ್ನೋಣವೇ. ರಾಮಕೃಷ್ಣ ಪೆಜತ್ತಾಯರಂದಂತೆ ದೇವಿಯ ಕೋಪದ ವಾಕ್ಯಗಳು ಪುರಾಣದಲ್ಲಿ ಇವೆ. ಹಾಗೆಯೇ ದೇವಿಯ ಸಂದರ್ಭದ ಪರಿಸ್ಥಿಯೂ ವರ್ಣಿಸಲ್ಪಟ್ಟಿದೆ. ಆದರೆ ಅದೇ ರೀತಿ ಸಪ್ತಶತಿಯ ನಾಲ್ಕನೇ ಅಧ್ಯಾಯದಲ್ಲಿ ರೀತಿಯೂ ಕಾಣಬಹುದಾಗಿದೆ:
"ದುರ್ವೃತ್ತವೃತ್ತಶಮನಮ್ ತವ ದೇವಿ ಶೀಲಮ್
ರೂಪಮ್ ತಥೈದವಿಚಿಂತ್ಯಮತಲ್ಯಮನ್ಯೈಃ /
ವೀರ್ಯಂ ಹಂತೃ ಹೃತದೇವಪರಾಕ್ರಮಾಣಾಮ್
ವೈರಿಷ್ವಪಿ ಪ್ರಕಟಿತೈವ ದಯಾ ತ್ವಯೇತ್ಥಮ್ "

"ಹೇ ದುರ್ಗೆಯೇ ಯಾರಿಂದಲೂ ಆಗದೇ ಇರುವ ಸಮಸ್ಯೆಯನ್ನು ಶಮನಗೊಳಿಸಿದ ನಿನ್ನ ರೂಪವು ಹಾಗೆಯೇ ಇದ್ದುದು ಯಾರಿಂದಲೂ ಊಹಿಸಲಾಗದ್ದು. ದೇವತೆಗಳ ಪರಾಕ್ರಮವನ್ನಪಹರಿಸಿದವರ ಸಾಮರ್ಥ್ಯವನ್ನಪಹರಿಸಿದವಳು ನೀನಾದರೂ ವೈರಿಗಳಲ್ಲೂ ನಿನ್ನಿಂದ ರೀತಿಯ ದಯೆಯು ಪ್ರಕಟವಾಗುತ್ತದೆ.
ಇದು ದೇವತೆಗಳ ಸ್ತುತಿ. ದಯೆಯ ಪ್ರಾಕಟ್ಯ ಕ್ರೋಧವನ್ನು ಮರೆಮಾಚುತ್ತದೆ. ಅವಳ ಕ್ರೋಧ ಮಹಿಷಾಸುರನನ್ನು ಕೊಲ್ಲುವುದಕ್ಕಿಂತ ಮೊದಲು, ಕೊಲ್ಲುವಾಗ, ತದನಂತರವೂ ಅವಳ ರೂಪವು ಒಂದೇ ರೀತಿ ಇದೆ ಮತ್ತು ರೂಪ ವೈರಿಗಳಲ್ಲೂ ದಯೆವುಳ್ಳದ್ದಾಗಿದೆ. ನಾವು ಮಕ್ಕಳಿಗೆ ಬೈದಂತೆ ನಟಿಸುವ ಹಾಗೆ. ಹೀಗಿರುವಾಗ ಕೋಪ ರೌದ್ರ ಎನ್ನಲಾದೀತೇ? ನಾನು ಹಿಂದೆಯೇ ಲೇಖನದ ಭಾಗ ೧ರಲ್ಲಿ ಅಂದಂತೆ "ಈಷತ್ಸಹಾಸಮಮಲಮ್..." ಶ್ಲೋಕದಿಂದ ತಿಳಿಯುವಂತೆ ಮಹಿಷಾಸುರನನ್ನು ಕಾಣುವಾಗಲೂ ನಗುಮೊಗದ ದೇವಿ ಅವಳು; "ಲೀಲಯೈವ  ಪ್ರಚಿಚ್ಛೇದ...." "ಲೀಲಯೈವ ಶರೋತ್ಕರಾನ್" ಇತ್ಯಾದಿ ವಾಕ್ಯಗಳಿಂದ ಮಹಿಷಾಸುರನ ವಧೆಯೂ ಅವಳಿಗೆ ಲೀಲೆಯೇ. ಅರುಣಾಸುರಾದಿಗಳನ್ನು ಮುಂದೆ ಇಂತಿಂತಹ ರೂಪಗಳಿಂದ ಕೊಲ್ಲುತ್ತೇನೆಂಬ ಭವಿಷ್ಯವಾಕ್ಯ ರಾಕ್ಷಸರ ಸಾಮರ್ಥ್ಯ ಮತ್ತು ಅದಕ್ಕೆ ತನ್ನಲ್ಲಿರುವ ಪ್ರತಿ ಸಾಮರ್ಥ್ಯದ ಬಗ್ಗೆ ಅವಳ ನಿಶ್ಚಯಾತ್ಮಕ ಜ್ಞಾನವನ್ನು ಸ್ಫುಟಗೊಳಿಸುತ್ತದೆ. ಕ್ರೋಧಾಧಿಕ್ಯ ಮನೋದಾರ್ಢ್ಯವನ್ನು ನಿರಸನಗೊಳಿಸುತ್ತದೆ. ಸಂದರ್ಭದಲ್ಲಿ ತನ್ನ ನಿಯಂತ್ರಣ ಮೀರಿ ಆಗುವ ಕ್ರಿಯೆಯೇ ದೇಹದ ನಡುಕ. ಅದು ಮೇಲಿನ ವಾಕ್ಯಗಳಿಂದ ಇಲ್ಲವೆಂದಾದಮೇಲೆ ನಡುಕ ಕ್ರೋಧದ ನಡುಕವಲ್ಲವೆಂದೇ ಹೇಳಬೇಕು. ‘ಚಡೀ ಕೋಪೇಎಂದು ಧಾತ್ವರ್ಥವಾದರೂ ಕೋಪವೆನ್ನುವುದು ಅನುಗ್ರಹರಾಹಿತ್ಯವೆಂಬ ಅರ್ಥಕ್ಕೇ ಸೀಮಿತವೆಂದು ಯಾಕೆ ಯೋಚಿಸಬಾರದು.
ಮತ್ತೊಂದು ಪರಕಾಯಪ್ರವೇಶದ ನಡುಕ. ಇದನ್ನು ನಾವು ಕೋಲದಲ್ಲೋ, ನಾಗದರ್ಶನದಲ್ಲೋ ಕಾಣುತ್ತೇವೆ. ಇದಕ್ಕೆ ಮಧುಕರ ಭಾಗವತರ ಪ್ರತಿಕ್ರಿಯೆ ಸೊಗಸಾಗಿದೆ.
poojyare, kampisuvudu namma dehada tarangadalli innondu taranga super impose aadaga body imbalance aagi tadedukollade naduka untaguvudu. idu darshana patrigalalli kanuva samanya sthithi. Devi mahathme aatadalli devi deviye horathu devi darshana alla endu patradharige nenapiddarayithu .
ಇದು ಒಂದರ್ಥದ ಉತ್ತರ ಕೂಡ. ಸಂದರ್ಭದಲ್ಲಿ ದೇಹವನ್ನು ದೈವಿಕಶಕ್ತಿಯೇ ಆಳುತ್ತದೆ. ಆದ್ದರಿಂದ ನಡುಕ ಸಾಮಾನ್ಯ. ಆಗ ವ್ಯಕ್ತಿ ಹೇಳಿದ್ದನ್ನು ದೈವ ಹೇಳಿತು ಅನ್ನುತ್ತೇವೆಯೇ ವಿನಹ ವೇಷದವ ಅಂತ ಅನ್ನುವುದಿಲ್ಲ. ಹಾಗಂದರೆ ಅದು ಕೋಲವೇ ಆಗುವುದಿಲ್ಲ. ನಂಬಿಕೆಯಂತೆ ಆಗ ದೈವವೇ ವ್ಯಕ್ತಿಯಲ್ಲಿರುತ್ತದೆಯೇ ವಿನಹ ವ್ಯಕ್ತಿಯಾಗಿ ಅವ ಕಾಣಲಾರ, ಕಾಣಬಾರದು ಕೂಡ. ಅಲ್ಲಿ ಇರುವುದು ಅಭಿನಯವಲ್ಲ. ಇಲ್ಲಿ ಹಾಗಲ್ಲ. ನಾಟ್ಯಶಾಸ್ತ್ರದ ನಿಯಮದಂತೆಯೇ ಅವನದ್ದು ಅಭಿನಯ. ವೇಷಧಾರಿಯು ಸಹೃದಯನಿಗಿಂತ ಭಿನ್ನ. ವೇಷಧಾರಿಗೆ ಎಂದೂ ಅವ ವೇಷವೇ ಆಗಿ ಕಾಣಬೇಕೇ ವಿನಹ ಅದೇ ಆಗಬಾರದು. ತದ್ವತ್ತಾ ಅಲ್ಲಿರಬೇಕೇ ವಿನಹ ತತ್ ಆಗಕೂಡದು. ಸಹೃದಯನಿಗೆ ಮಾತ್ರ ತಾದ್ರೂಪ್ಯ ಯಾ ಅಭೇದ ಸಂಬಂಧೆನ ಅದು ವೇದ್ಯವಾಗಬೇಕು. ಜನರೂ ಇದನ್ನೇ ನಂಬುತ್ತಾರೆ. ಆದ್ದರಿಂದಲೇ ಪಾತ್ರಿಗಿರುವ ಅಂತಹ ಅಲೌಕಿಕ ಗೌರವ ಕಲಾವಿದನಿಗಿರುವುದಿಲ್ಲ. ಆದ್ದರಿಂದಲೇ ಲೋಕವ್ಯವಹಾರದ ಭಾಷೆಯಂತೆ ಕಲಾವಿದ ಪಾತ್ರಿಯಲ್ಲ. ಪಾತ್ರಿ ಕಲಾವಿದನಲ್ಲ.
ಇನ್ನೂ ಕೆಲವು ವಿಚಾರಗಳು.
. ಲೋಕಪ್ರಸಿದ್ಧವೆನಿಸಿದ್ದು ಶಾಸ್ತ್ರಕ್ಕೆ ಸಮ್ಮತವಾದ್ದೇ. ಅಲ್ಲವೆಂದಲ್ಲ. ಆದರೆ ಲೋಕಪ್ರಸಿದ್ಧವೆಂದು ನಿರ್ಣಯಕ್ಕೆ ನಾವು ಹೇಗೆ ಬರುವುದು? ಯಕ್ಷಗಾನದಲ್ಲಿ ದೇವಿಮಾಹಾತ್ಮೆ ಬಹಳ ಹಿಂದಿನಿಂದಲೂ ಪ್ರಸಿದ್ಧ ಪ್ರಸಂಗವೇ, ಅಷ್ಟು ಮಾತ್ರವಲ್ಲ ಅತೀಹೆಚ್ಚಿನ ಅಲೌಕಿಕ ಕಲ್ಪನೆಯ ಪ್ರಸಂಗವೂ ಹೌದು. ಹಾಗಿದ್ದರೂ ಇತ್ತೀಚಿನ ಎರಡು ದಶಕದಲ್ಲಿ ಮಾತ್ರ ದೇವಿಯ ನಡುಕದ ಆಂಗಿಕ ಅಭಿನಯ ಆರಂಭ ಆಯಿತು. ಇದಕ್ಕಿಂತ ಮೊದಲು ದೇವಿ ಹಾಕಿದ ಮಹನೀಯರು ಹಾಗೂ ಈಗ ನಡುಕವಿಲ್ಲದೇ ದೇವಿ ಹಾಕುವ ಮಹನೀಯರು ನಡುಕವಿಲ್ಲದೆಯೇ ಪ್ರೇಕ್ಷಕರನ್ನು (ಸಹೃದಯರನ್ನು ಅನ್ನುವುದು ಬೇಡ ಬಿಡಿ) ತನ್ನತ್ತ ಸೆಳೆಯಲಿಲ್ಲವೇ ಯಾ ಸೆಳೆಯುವುದಿಲ್ಲವೇ? ಈಗ ಆಟ ನೋಡುವ ಪ್ರೇಕ್ಷಕರಂತೆ ಹಿಂದಿನ ಪ್ರೇಕ್ಷಕರು ಸುಶಿಕ್ಷಿತರು ಆಗಿರಲಿಲ್ಲ ಎನ್ನುವುದು ನಿರ್ವಿವಾದ. ಅದು ಅನಕ್ಷರಸ್ಥರೇ ಇದ್ದ ಕಾಲ. ಮೂಢನಂಬಿಕೆಗಳೆಂದೂ ಕೆಲವರಿಂದ ಕರೆಸಿಕೊಳ್ಳುವ ಹಲವಾರು ಆಚರಣೆಗಳಿದ್ದ ಕಾಲ. ನಿಜವಾಗಿ ಅಂತಹ ಪ್ರೇಕ್ಷಕರಿಗೆ ಅಂದಿನ ಕಾಲದಲ್ಲಿ ನಡುಕದ ಅಗತ್ಯ ಇತ್ತೊ ಎನೋ; ಅವರನ್ನು ತನ್ನೆಡೆಗೆ ಸೆಳೆಯಲು ಇಂತಹ ಮೋಡಿಗಳು ಬೇಕಿತ್ತೋ ಏನೋ ಎಂದು ಯೋಚಿಸಿದರೆ ಅದಿಲ್ಲದೆಯೇ ಆಗ ಅವರನ್ನು ಸೆಳೆಯುತ್ತಿತ್ತು ಅಂದಲ್ಲಿ ಈಗ ಇದರ ಅಗತ್ಯ ಹೇಗೆ ಬಂತು? ಈಗ ಬೇಕೇ ಬೇಕು ಅಂದಲ್ಲಿ ಈಗ ಪ್ರೇಕ್ಷಕರ ಮಟ್ಟವು ಕಡಿಮೆಯಾಗಿದೆ ಅನ್ನೋಣವೇ? ಅದಲ್ಲದಿದ್ದರೆ ಆಗ ಇಲ್ಲದ್ದು ಈಗ ಯಾಕೆ? (ಮೊದಲ ದೇವೀ ಪಾತ್ರಧಾರಿ ಕಡಂದೇಲು ಪುರುಷೋತ್ತಮ ಭಟ್ಟರು ತನ್ನ ಕೊನೆಯ ಕಾಲದಲ್ಲೂ ಕೂಡ ನಡುಕಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು)
. ಅಲೌಕಿಕತೆಗೆ ದರ್ಶನ ಎನ್ನುವುದು ಲೌಕಿಕವಾದ ಪ್ರಾದೇಶಿಕ ಶಿಷ್ಟಾಚಾರದಿಂದ ಸರಿಯೆಂದು ಒಪ್ಪಿದರೆ ಸರ್ವತಂತ್ರ ಸ್ವತಂತ್ರನಾಗಿರುವ ವಿಷ್ಣುವಿಗೂ ನಡುಕ ಬೇಡವೇ? ಅದೇ ಪ್ರಸಂಗದಲ್ಲಿ ಮಧುಕೈಟಭರಿಗೆ ದಿವ್ಯದೃಷ್ಟಿ ನೀಡಿ ತಾನು ಯಾರೆಂದು ಕಾಣಿಸುವ ವಿಷ್ಣುವಿಗೆ ದರ್ಶನ ಯಾಕೆ ಬರಕೂಡದು. ವರ ನೀಡಲು ಹೆಚ್ಚಿನ ಪ್ರಸಂಗಗಳಲ್ಲಿ ಕಾಣಸಿಗುವ ಬ್ರಹ್ಮನೋ, ಶಿವನೋ ಯಾಕೆ ದರ್ಶನಕ್ಕೆ ಆಲಂಬನವಿಭಾವವಾಗಬಾರದು?
. ಇನ್ನೊಂದು ವಿಚಾರ. ದೇವಿಯ ಕೋಪ ನಡುಕಕ್ಕೆ ಕಾರಣ ಎನ್ನುವುದೇ ಹೌದಾದರೆ ಅದು ತಾಮಸೀ ಪ್ರವೃತ್ತಿ ಎಂಬ ವಿಚಾರಕ್ಕೆ ತಿರುಗಿ ತಾಮಸೀ ಪ್ರವೃತ್ತಿಗೆ ದರ್ಶನ ಬೇಕು ಎನ್ನುವವರೆಗೆ ವಾದ ಬೆಳೆಯಿತು. ನಾಗದರ್ಶನ ಯಾ ಕೋಲವನ್ನೇ ಉದಾಹರಣೆಯನ್ನಾಗಿ ಸ್ವೀಕರಿಸೋಣ. ಇಲ್ಲಿ ದರ್ಶನ ಕೋಪದ ಸಂಕೇತವೋ? ಹಾಗಿದ್ದಲ್ಲಿ ಅವುಗಳನ್ನು ಪ್ರಸನ್ನೀಕರಿಸಲು ಅದು ಮಾಧ್ಯಮವಾಗುವುದಾದರೂ ಹೇಗೆ? ಇಲ್ಲ ಪ್ರಕೃತಿ ಎನ್ನೋಣವೇ. ಇಂತಹ ದಿವ್ಯ ಶರೀರಿಯಾದ ಸರ್ವತಂತ್ರ ಸ್ವತಂತ್ರನಾದ ವಿಷ್ಣುವಿಗೂ ದರ್ಶನ ಬರಬೇಡವೇ?
ಹಾಗೆ ಯೋಚಿಸಲು ಹೊರಟರೆ ಎಲ್ಲಿ ಕೊನೆ ಮುಟ್ಟೀತು? ಹಾಗಾಗಿ ಯೋಚಿಸಬೇಕು. ಯಕ್ಷಗಾನಕ್ಕೆ ದಿವ್ಯತೆಯ ದರ್ಶನಕ್ಕೆ ಬೇರೆ ಮಾಧ್ಯಮಗಳಿರುವಾಗ ನಡುಕ ಅನಿವಾರ್ಯವೇ? ಎಂದು. ಮತ್ತೊಂದು ಪ್ರಶ್ನೆ. ನಾಗದರ್ಶನಕ್ಕೂ ಯಾ ಕೋಲಕ್ಕೂ ನಾಟ್ಯಶಾಸ್ತ್ರಕ್ಕೂ ಏನಾದರೂ ಸಂಬಂಧವಿದೆಯೇ? ಇದ್ದಲ್ಲಿ ಹೇಳಬಹುದೇನೋ. ಇದು ಅನಿವಾರ್ಯವೆಂದು.
ಇನ್ನು ಯಕ್ಷಗಾನದ ಸೇವಾರೂಪತೆ. ಅದೇ ಪೂಜೆ ಅನ್ನುವ ಭಾವನೆ. ಕಟೀಲಿನಲ್ಲಿ ದೇವೀ ಮಾಹಾತ್ಮ್ಯೆ ಆಗಕೂಡದೆಂಬುದು ನಿಜ. ಎಲ್ಲ ವಿಚಾರಗಳನ್ನು ಸಾಹಿತ್ಯ ಶಾಸ್ತ್ರ ದೃಷ್ಟಿಯಿಂದಲೇ ಕಾಣಬಹುದು. "ಚತುರ್ವರ್ಗಫಲಪ್ರಾಪ್ತಿಃ ಸುಖಾದಲ್ಪಧಿಯಾಮಪಿ / ಕಾವ್ಯಾದೇವ......//” ಎಂದು ವಿಶ್ವನಾಥನ ಮಾತು, ಧರ್ಮಾರ್ಥಕಾಮಮೋಕ್ಷೇಷು ವೈಚಕ್ಷಣ್ಯಮ್ ಕಲಾಸು / ಕರೋತಿ ಕೀರ್ತಿಮ್ ಪ್ರೀತಿಮ್ ಸಾಧುಕಾವ್ಯ ನಿಷೇವಣಮ್ಎಂಬ ಭಾಮಹನ ವಾಕ್ಯ, “ಸದ್ಯಃ ಪರ ನಿರ್ವೃತಯೇಎಂಬ ಮಮ್ಮಟನ ವಚನ ಕಾವ್ಯದ ಫಲವೇ ಆಮುಷ್ಮಿಕವಾದದ್ದು ಅನ್ನುತ್ತದೆ. ಹೀಗಿರುವಾಗ ಇದನ್ನು ಪೂಜೆಯಲ್ಲದೆ ಮತ್ತೇನೆಂದು ಹೇಳೋಣ. ಅಲ್ಲಿ ಕಾಣುವ ಪ್ರತಿಯೊಂದು ಪಾತ್ರದಲ್ಲೂ ಅಭೇದ ಯಾ ತಾದ್ರೂಪ್ಯಭಾವದಿಂದ ರಸ ನಿಷ್ಪತ್ತಿ ಆಗಬೇಕಾದುದರಿಂದ ಅದನ್ನು ರೂಪಕ ಅನ್ನುತ್ತಾರೆ. ಅಂತಹ ಭಾವ ಕಟೀಲಿನಲ್ಲಿ ಬಂದಲ್ಲಿ ಎರಡು ದೇವೀ ಸಾನಿಧ್ಯ ಸಹೃದಯರಿಗೆ  ಆಗುತ್ತದೆಂಬ ಶಾಸ್ತ್ರನಿಷ್ಕರ್ಷೆಯಿಂದ ನಿಷೇಧವು ನಂಬುಗೆಯಾಗಿ ಬಂದಿದೆ.
ಯಾವುದೇ ಕಾವ್ಯದ ಪ್ರಯೋಜನವನ್ನು ಚಿರಂತನರು ಹೀಗೆ ವಿಶ್ಲೇಶಿಸಿದ್ದಾರೆ. "ಕಾವ್ಯಸ್ಯ ಪ್ರಯೋಜನಮ್ ಹಿ ರಸಾಸ್ವಾದಸುಖಪಿಂಡನದ್ವಾರಾ ವೇದಶಾಸ್ತ್ರವಿಮುಖಾನಾಮ್ ವಿನೇಯಾನಾಮ್ ರಾಜಪುತ್ರಾದೀನಾಮ್ ರಾಮಾದಿವತ್ ಪ್ರವರ್ತಿತವ್ಯಮ್, ರಾವಣಾದಿವತ್; ಇತ್ಯಾದಿ ಕೃತ್ಯಾಕೃತ್ಯಪ್ರವೃತ್ತಿನಿವೃತ್ತ್ಯುಪದೇಶಃ" ಎಂದು.
ರಸಾಸ್ವಾದ ಸುಖಪಿಂಡದ ಜೊತೆಗೆ ವೇದಶಾಸ್ತ್ರಗಳನ್ನು ಓದದ ಸಜ್ಜನರಾದ ರಾಜಕುಮಾರಾದಿಗಳಿಗೂ (ಅವರಿಗೆ ಶ್ರೀಮಂತಿಕೆ ಇರುವುದನ್ನು ಲಕ್ಷ್ಯಿಸಿ ಅಹಂಕಾರ ಇರುವವರಿಗೂ ಎಂದರ್ಥ) ರಾಮನ ಹಾಗೆ ವ್ಯವಹರಿಸಬೇಕು, ರಾವಣನಂತಲ್ಲ ಎಂಬುದಾಗಿ ಮಾಡಬೇಕಾದ ಹಾಗೂ ಮಾಡಬಾರದ ಕ್ರಿಯೆಗಳಲ್ಲಿ ಕ್ರಮವಾಗಿ ಪ್ರವೃತ್ತಿ ಹಾಗೂ ನಿವೃತ್ತಿಯ (ಅಂದರೆ ಮಾಡಬೇಕಾದ ಕ್ರಿಯೆಗಳಲ್ಲಿ ಪ್ರವೃತ್ತಿ ಹಾಗೂ ಮಾಡಬಾರದ ಕ್ರಿಯೆಗಳಲ್ಲಿ ನಿವೃತ್ತಿ ಎಂದರ್ಥ) ನೀತಿಯ ಉಪದೇಶವೇ ಕಾವ್ಯದ ಪ್ರಧಾನ ಪ್ರಯೋಜನ.
ಹಾಗಾದಾಗ ಇಲ್ಲಿ ಆಮುಷ್ಮಿಕವಾದ ತತ್ವಕ್ಕೆ ವಿರೋಧವಾಗಕೂಡದು. ಆದರೆ ಅದು ಸೇವೆ ಎನಿಸಿಕೊಳ್ಳುವುದಿಲ್ಲ. ಇದೇ ಲಕ್ಷ್ಯವಾಗಿರಿಸಿ ಕಾವ್ಯದಿಂದ ಆಗುವ ಆನಂದವನ್ನು ಬ್ರಹ್ಮಾನಂದ ಸಹೋದರಃ ಎಂದರು.
ಅಷ್ಟಕ್ಕೂ ದರ್ಶನದ ಅಗತ್ಯತೆ ಅನಿವಾರ್ಯ ಎಂದು ಮೂಗುದಾರ ಸಡಿಲಗೊಳಿಸುವುದಾದರೆ ದರ್ಶನದ ತೀವ್ರತೆಯೂ ಆವಶ್ಯಕ ಎಂದು ಯಾಕನ್ನಬಾರದು? ಕೋಲಗಳಂತೆ ಪೂರ್ಣದರ್ಶನವನ್ನೇ ತರಬಹುದಲ್ಲವೇ? ಹಾಗೆಯೂ ಆಗಬಹುದೆಂದಲ್ಲಿ ಮುಂದೊಂದು ದಿನ ಯಕ್ಷಗಾನ ಅನ್ನುವುದು ಇಲ್ಲದೇ ಹೋಗುವ ಅಪಾಯವನ್ನೂ ನಾವು ಎದುರಿಸಬೇಕಾದೀತು.
ಇದು ನನ್ನ ನಿಲುವು. ಇದನ್ನು ವೈಯಕ್ತಿಕ ಎಂದು ಯಾರೂ ದಯವಿಟ್ಟು ತಿಳಿದುಕೊಳ್ಳಬೇಡಿ. ಶಾಸ್ತ್ರೀಯ ವಿಮರ್ಶೆಯಾಗಿ ಮನನ ಮಾಡಿ. ನಮಸ್ಕಾರ.
-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
           Vidwan Sriharinarayanadasa Asranna, Kateelu

No comments:

Post a Comment