Saturday 6 February 2016

ಬೆಳಕಿನ ಸೇವೆ

ನಮ್ಮಲ್ಲಿ ತಂದೆ ಉರು ಹಾಕಿಸಿದರು (ಪುನರಾವರ್ತನೆ).
"ಅಗ್ನೇ  ನಯ ಸುಪಥಾ ರಾಯೆ ವಿಶ್ವಾನಿ ದೇವ ವಯುನಾನಿ ವಿದ್ವಾನ್ /
ಯುಯೋಧ್ಯ ಅಸ್ಮಜ್ಜುಹುರಾಣಮೇನೋ ಭೂಯಿಷ್ಠಾಂತೇ ನಮ ಉಕ್ತಿಮ್ ವಿಧೇಮ //"  ಎಂದು.
ವೇದದ ಋಕ್ ಅದು. ಬಾಯಿಪಾಠ ಮಾಡಿದೆವು. ಹೇಳಬೇಕಾದಲ್ಲಿ ಹೇಳಿದೆವು. ಅದು ಒಂದು ರೀತಿಯ ಬಾಯಿಪಾಠ ಅಷ್ಟೇ. ಅದರ ಅರ್ಥ ಯಾರಿಗೆ ಗೊತ್ತು. ಉಡುಪಿಯಲ್ಲಿ ಕಲಿತ ನಂತರ ಇದರ ಬಗ್ಗೆ ಅರ್ಥಕ್ಕಾಗಿ ಓದಿದೆ. ಆವಾಗ ಗೊತ್ತಾಯಿತು. ಇದರ ಅರ್ಥ.
ಓ ಅಗ್ನಿಯೇ, ದೇವತೆಗಳಿರುವ ವಿಶ್ವಗಳನ್ನು ಕುರಿತು ಹೋಗಲಿಚ್ಛಿಸುವ ನನ್ನನ್ನು ಸನ್ಮಾರ್ಗದಲ್ಲಿ ಕೊಂಡುಹೋಗು. ಇದಕ್ಕೆ ಎದುರಾಗಿ ಬರುವ ಶತ್ರುಗಳಲ್ಲಿ ಹೋರಾಡು. ನಿನಗೆ ಬಹಳಷ್ಟು ನಮಸ್ಕಾರವನ್ನು ಆಚರಿಸುತ್ತೇವೆ ಎಂದು. ಇದು ಮೇಲ್ನೋಟದ ಅರ್ಥ. ಅಗ್ನಿಯ ಹೆಸರೇ ಅಂಥದ್ದು. ‘ಅಗಮ್ ನಯತಿ ಇತಿ ಅಗ್ನಿಃ’. ಅಂದರೆ ಹೋಗುವ ಗುಣ, ಇಲ್ಲದ್ದನ್ನೂ ಕೊಂಡೊಯ್ಯುವ ಗುಣವುಳ್ಳದ್ದು ಅದು ಎಂದು. ಜಡಗಳನ್ನೂ ಕೊಂಡುಹೋಗುವ ಗುಣ ಇದಕ್ಕಿದೆ ಎಂದು. ಇದಕ್ಕೆ ಉದಾಹರಣೆಯಾಗಿ ನಮ್ಮಲ್ಲಿರುವ ವಾಹನ ಇತ್ಯಾದಿಗಳನ್ನು ತೆಗೆದುಕೊಳ್ಳಬಹುದು. ವಿದ್ಯುತ್ ಎನ್ನುವುದೂ ಅಗ್ನಿಯ ಪ್ರಬೇಧವಾದ್ದರಿಂದ ಅಡುಗೆ ಮನೆಯಿಂದ ಹಿಡಿದು ರೈಲಿನವರೆಗೆ. ದ್ವಿಚಕ್ರವಾಹನದಿಂದ ಹಿಡಿದು ವಿಮಾನದವರೆಗೆ ಎಲ್ಲವೂ ಇದರಿಂದಲೇ ನಡೆಯುವುದು.
ನಮ್ಮನ್ನೂ ಕೊಂಡುಹೋಗು ಎಂದು ಸಾಮಾನ್ಯ ಅರ್ಥವನ್ನೇ ತೆಗೆದುಕೊಳ್ಳೋಣ. ದೇಹದ ಬಿಸಿ ಎನ್ನುವುದೇ ದೇಹದ ಉಳಿವಿಗಾಗಿ. ಅದರಿಂದ ಈ ಚೇತನವಸ್ತುಗಳೂ ನಾವು ಚಲಿಸುತ್ತವೆ ಅಂದರೆ ನಾವು ಚಲಿಸುತ್ತೇವೆ. ಕೆಲಸದ ಆಧಿಕ್ಯದಲ್ಲಿ ನಮ್ಮ ಮೈ ಬಿಸಿಯಾಗುವುದನ್ನು ಕಾಣುತ್ತೇವೆ. ಹೀಗಿರುವಾಗ ನಾವೂ ಚಲಿಸುವುದು ಈ ಅಗ್ನಿಯಿಂದ. ಆದ್ದರಿಂದ ಅಗ್ನಿಯೇ ಚಲಿಸಲು ಶಕ್ತಿ.
ಪಂಚೇಂದ್ರಿಯಗಳಲ್ಲಿ ಕಣ್ಣನ್ನು ತೇಜಸ್ಸತ್ತ್ವ ಅಂದರು. ಅದು ಕಾಣುತ್ತದೆ. ಅದರಿಂದ ಮೆದುಳಿಗೆ ಸ್ವರೂಪದ ರವಾನೆ ಆಗುತ್ತದೆ. Camera ದಲ್ಲಿ ಒಮ್ಮೆಲೇ Flash ಆಗಿ ನಮ್ಮ ಚಿತ್ರದ ಮುದ್ರೆ ಬಂದಂತೆ. ಆವಾಗ ಪ್ರತಿಕ್ರಿಯೆಗಾಗಿ ಮೆದುಳು ನಿರ್ದೇಶಿಸುತ್ತದೆ. ಆದರೆ ಆಗಲೂ ಸಂಚಾರಕ್ಕಾಗಿ  ಬೆಳಕೇ  ಬೇಕು. ಇಲ್ಲದಿದ್ದರೆ ದಾರಿ ಕಾಣದು. ಹಾಗಾಗಿ ಗ್ರಹಿಸುವಲ್ಲಿ, ಗ್ರಹಿಸಿದ್ದನ್ನು ಮುಂದುವರಿಸುವಲ್ಲಿ ಅಗತ್ಯವಾದದ್ದು ಅಗ್ನಿಯೇ. ಆದ್ದರಿಂದ ಅಂತಹ ಗ್ರಹಣ ಸಾಮರ್ಥ್ಯವುಳ್ಳ ತಿಳಿದವರು ಕಣ್ಣನ್ನೂ ಅಗ್ನಿಯೆಂದರು.
ಇದು ಹೊರಗಣ್ಣಿನ ಕಥೆ. ಆದರೆ ನಾವು ಒಪ್ಪುವ ಒಳಗಣ್ಣೊಂದಿದೆಯಲ್ಲ. ಆ ಕಣ್ಣಿಗೆ ಅಗ್ನಿ ಯಾವುದು? ಅಂದರೆ ಚಲನಶಕ್ತಿ ಯಾವುದು? ಒಳಗಣ್ಣು ಅಂದರೆ ಜ್ಞಾನ ಎಂದರು ಕೆಲವರು. ಕೆಲವರು ಕಲಿತವರು ಜ್ಞಾನಿಗಳು ಅಂದರು. ಸತ್ಯವೇ? ಅಲ್ಲವೇ ಅಲ್ಲ. ಕಲಿತವ ವಿದ್ಯಾವಂತ. ಅಂತಹ ವಿದ್ಯೆಯು ಬುದ್ಧಿಯ ಜೊತೆಗೂಡಿ ವಿಷಯದ ಮಂಥನವೋ, ಗುದ್ದಾಟವೋ, ಅರೆಯುವಿಕೆಯೋ ಆಗಲ್ಪಟ್ಟಾಗ ಉತ್ಪತ್ತಿಯಾದದ್ದು ಏನಿದೆಯೋ ಅದು ಜ್ಞಾನ ಅನಿಸುತ್ತದೆ. ಒಂದು ವಿಚಾರದ ಬಗ್ಗೆ ಯಾ ಒಬ್ಬನ ಬಗ್ಗೆ ತಿಳುವಳಿಕೆ ಸರಿಯಾಗಿಲ್ಲದಿದ್ದರೆ ಅವನ / ಅದರ ವಿಚಾರವಾಗಿ ನಮ್ಮ ಪ್ರತಿಕ್ರಿಯೆ ತಪ್ಪಾಗಿ ಅದು ದಾರಿ ತಪ್ಪುತ್ತದೆ. ಇದರಿಂದ ನಮ್ಮ ಜೀವನವೇ ಎಲ್ಲೆಲ್ಲಿಗೋ ಹೋಗುತ್ತದೆ. ಅಲ್ಲಿಯೂ ದಾರಿಗಾಗಿ ಕಣ್ಣಿನಂತೆ ಜ್ಞಾನ ಬೇಕು. ಆ ಜ್ಞಾನವು ಗಣಿಯಿಂದ ಬಂದ ಅಪೂರ್ವವಾದ ಅಪ್ಪಟಚಿನ್ನದಂತೆ ಕಾಣುತ್ತದೆ. ಇದೇ ಒಳಗಣ್ಣು. ಆ ಒಳಗಣ್ಣು ಇಲ್ಲದ ವ್ಯಕ್ತಿಯನ್ನೇ ಅಜ್ಞಾನದಿಂದ ಅಂಧ ಎನ್ನುತ್ತೇವೆ. ಜ್ಞಾನಿಯ ಜ್ಞಾನವನ್ನು ಜ್ಯೋತಿ ಅನ್ನುತ್ತೇವೆ. ಆದ್ದರಿಂದ ಆ ಜ್ಞಾನವೇ ಬೆಳಕು.
ಈಗ ಮೊದಲಿನ ವೇದವಾಕ್ಯವನ್ನು ಮತ್ತೊಮ್ಮೆ ಅರ್ಥೈಸೋಣ.
ನಮಗೆ ಕಣ್ಣು ಕಾಣದಾದಾಗ ನಮ್ಮ ಹುಡುಕಾಟ ದಾರಿಗಲ್ಲ; ಬದಲಾಗಿ ಬೆಳಕಿಗಾಗಿ. ಹೊರಗಿನ ಬೆಳಕು ಸಿಗದೇ ಇದ್ದಾಗ, ಆಗ ಬೆಳಕಿನ  ಹುಡುಕಾಟ ಒಳಗಣ್ಣಿನ ತೆರೆಯುವಿಕೆಗೆ ನಾಂದಿಯಾಯಿತು. ಆಗ ದಾರಿ ಒಳಗಣ್ಣಿನಿಂದ ಸಿಕ್ಕಿತು. ಅದುವೇ ದರ್ಶನವಾಯಿತು. ಅವ ದಾರ್ಶನಿಕನಾದ. ಆ ದರ್ಶನವೇ ಸ್ವಯಂಪ್ರಕಾಶ ಉಳ್ಳದ್ದು ಎಂದು ಸಾರ್ವಕಾಲಿಕವಾಗಿ ಹೇಳಲ್ಪಟ್ಟಿತು. ಅದುವೇ ನೈರಂತರ್ಯದ್ದಾಯಿತು. ಅದೇ ಆ ದೇವತೆಗಳನ್ನು ಕುರಿತು ಸುಪಥಾವನ್ನು ತೋರಿಸುವಂಥದ್ದಾಯಿತು. ಈ  ಬೆಳಕನ್ನೇ ಅಗ್ನಿ ಅಂದೆವು. ಅದೇ ಎಲ್ಲದಕ್ಕೂ ದಾರಿ ತೋರಿಸುತ್ತದೆ. ಹೀಗೆ ಹೊರಗಣ್ಣಿಗೆ ಒಂದು ರೀತಿಯಲ್ಲಿ ಕಾಣದಾದಾಗ ಉಂಟಾಗುವ ಅಂಧಕಾರವು ಒಳಗಣ್ಣಿಗೆ ಬೆಳಕಾಗುವ ಮೂಲಕ ನಮ್ಮ ತಮಸ್ಸನ್ನು ಅಂದರೆ ಕತ್ತಲನ್ನು ಬಾಧಿಸಿ ಬೆಳಕನ್ನು ಕಾಣಿಸುತ್ತದೆ. ಅದನ್ನೇ ದಾರ್ಶನಿಕರು ರಾತ್ರಿ ಸೂಕ್ತದ "ಜ್ಯೋತಿಷಾ ಬಾಧತೇ ತಮಃ" ಅನ್ನುವ ಶ್ರೌತವಾಕ್ಯದ ಒಟ್ಟು ತಾತ್ಪರ್ಯ ಅಂದರು .
ಅಂತಹ ತಮಸ್ಸೇ ಇರುವ ರಾತ್ರಿಯೂ ವ್ಯಾಖ್ಯಾನಿಸಲ್ಪಡುವಂಥದ್ದು ಅಂದರೆ ದರ್ಶನಕ್ಕೆ ಸಿಗುವಂಥದ್ದು ಅನ್ನುತ್ತದಲ್ಲ ಅದೇ ರಾತ್ರಿಸೂಕ್ತ; "ರಾತ್ರೀ ವ್ಯಖ್ಯದಾಯತೀ" ಎಂಬುದಾಗಿ. ಇದು ಹೇಗೆ ಸಾಧ್ಯ. ಯಾರಲ್ಲಿ ಕೇಳೋಣ; ಯಾರಲ್ಲಿ ಉತ್ತರ ಸಿಕ್ಕೀತು ಎಂದು ಯೋಚಿಸಿದಾಗ ದಾರ್ಶನಿಕರು ವಿವರಿಸಿದ್ದು ಪ್ರಳಯಕಾಲದ ಬಾಲಮುಕುಂದನನ್ನು. ಆ ಮುಕುಂದನ ಜೊತೆಗಿರುವವರು ಮೂವರು. ಶ್ರೀ, ಭೂ, ದುರ್ಗಾ ಎನ್ನುವ ಹೆಸರುಳ್ಳ ಮೂವರು. ಮುಕುಂದನೊಂದಿಗೆ ಯೋಗನಿದ್ರಾರೂಪಿಣಿಯಾಗಿ ಇರುವ ಶ್ರೀರೂಪಿಣಿಯಾದ ಮಾಯಾ ದೇವಿಯನ್ನು. ಇವಳನ್ನೇ ಸಪ್ತಶತೀಯಲ್ಲಿ (ದೇವೀ ಮಾಹಾತ್ಮ್ಯದಲ್ಲಿ) ವರ್ಣಿಸಿದರು "ನಿದ್ರಾಮ್ ಭಗವತೀಮ್ ವಿಷ್ಣೋಃ....” ಎಂದು. ಅನಂತರ ಸೃಷ್ಟಿಗೂ ನಾನೇ ಕಾರಣ ಎಂಬ ಸಂದೇಶವನ್ನು ಪೃಥಿವೀತತ್ತ್ವದ ಸಂಕೇತದಲ್ಲೇ ಕಾಣಿಸುವ ಭಗವಂತನ ಸಂಕಲ್ಪಕ್ಕಾಗಿ ಮಲಗಲು ಅಧಿಕರಣವಾಗಿರುವ (ಜಾಗವಾಗಿರುವ) ಆಲದೆಲೆಯಾಗಿ ಕಾಣುವ ಭೂರೂಪಿಣಿಯನ್ನು, ಆಮೇಲೆ ಯಾರಿಗೂ ದರ್ಶನದ ಪ್ರಾಪ್ತಿಯಿಲ್ಲದೆ ಭಗವಂತನನ್ನು ಕಾಣದಿರುವಂತೆ ಮಾಡಲು ತುಂಬಿದ ಕತ್ತಲೆ ಯಾ ನಿಶಾರೂಪಿಣಿಯಾದ ದುರ್ಗಾರೂಪಿಣಿಯನ್ನು. ಇವಳನ್ನೇ ವ್ಯಾಖ್ಯಾನಿಸಬೇಕು ಎಂದೇ ಇದರ ಅರ್ಥ. ಈ ನಿಶೆಯಲ್ಲಿಯೂ ಎಚ್ಚರಿಕೆಯಲ್ಲಿರುವ ಯಾ ಜಾಗೃತ್ಸ್ವರೂಪನಾದ ಭಗವಂತನ ಆ ಬಾಲಮುಕುಂದರೂಪವನ್ನು ಉಪನಿಷತ್ ಅಂದದ್ದು ಹೀಗೆ;  "ಯಾ ನಿಶಾ ಸರ್ವಭೂತಾನಾಮ್ ತಸ್ಯಾಮ್ ಜಾಗರ್ತಿ ಸಂಯಮೀ" ಎಂದು. ಅಂದರೆ ಯಾವಳು ಎಲ್ಲಾ ಜೀವಿಗಳಿಗೂ ರಾತ್ರಿಯಾಗಿ ಆವರಿಸಿರುತ್ತಾಳೋ ಅಂತಹ ಅವಳಲ್ಲಿಯೂ ಜಾಗೃತನಾಗಿರುವವನೇ ಸಂಯಮೀ ಎಂದು. ಇದು ಪರಮಾತ್ಮನಿಗೆ ಅನ್ವಯ. ಅವನೇ ಬಿಂಬ ಸ್ವರೂಪ. ಅವ ಅನಂತ ಸ್ವರೂಪಿಯಾಗಿರುವುದರಿಂದ ಅವನ ಒಂದೊಂದು ರೂಪವೂ ಪ್ರತಿಬಿಂಬವಾಗಿ ಕಾಣುವಂಥದ್ದಾಗುವಾಗ ಜೀವಿಯು ಅವನ ಪ್ರತಿಬಿಂಬ ಎನಿಸಲ್ಪಡುತ್ತಾನೆ. ಅಂತಹ ಭಗವಂತನ ಬಗ್ಗೆ ಸರಿಯಾಗಿ ತಿಳಿದಾಗ ಅವ ಬಿಂಬವೇ ಕಣ್ಣುಮುಚ್ಚಿದಾಗಲೂ ಕಾಣುವಂತೆ ಅಂದರೆ ಸಂಯಮಿಯಂತೆ ಕಾಣುತ್ತಾನೆ. ಅಂತಹ ದಾರ್ಶನಿಕ ಒಳಗಣ್ಣಿನಿಂದ ಎಂತಹ ಕತ್ತಲಲ್ಲಿಯೂ ಎಚ್ಚರದಲ್ಲಿರುತ್ತಾನೆ. ಅಂದರೆ ನಿದ್ರೆಯಿಂದ ದೂರನೆಂದರ್ಥವಲ್ಲ; ದಾರಿತಪ್ಪಲಾರ ಎಂದರ್ಥ. ಅಂದರೆ ಆವಾಗ ಕತ್ತಲೆಯೂ ಅವನಲ್ಲಿರುವ ಬೆಳಕಿನಿಂದ ಬಾಧಿಸಲ್ಪಡುತ್ತದೆ. ಇದನ್ನೇ "ಜ್ಯೋತಿಷಾ ಬಾಧತೇ ತಮಃ" ಅಂದದ್ದು. ಅವನಿಗೆ ಬೆಳಕೇ ಕಾಣುತ್ತದೆ. ಅದೇ ದಾರಿ ತೋರಿಸುತ್ತದೆ. ಅದರಿಂದ ಸುಪಥಾ ಅಂದರೆ ಒಳ್ಳೆಯ ಮಾರ್ಗ ಅವನಿಗೆ ಕಾಣಿಸಲ್ಪಡುತ್ತದೆ. ಅವ ದೇವರಿರುವ ಜಾಗಕ್ಕೆ ಹೋಗುತ್ತಾನೆ. ಅದುವೇ ಮೋಕ್ಷ ಅನ್ನಲ್ಪಡುತ್ತದೆ. ಇದನ್ನೇ "ತಮಸೋರ್ಮಾ ಜ್ಯೋತಿರ್ಗಮಯ" (ಇಂತಹ ಜಾಗಕ್ಕೆ ಹೋಗಲು ಬೆಳಕನ್ನು ತಿಳಿಸು") ಅಂದದ್ದು. ಇಲ್ಲಿಯೂ ತೋರಿಸು ಎನ್ನಲಿಲ್ಲ; ತಿಳಿಸು ಅಂದರು ನೋಡಿ. (ಸರಿಯಾಗಿ ಹೇಳುವುದಾದರೆ ಕರೆದುಕೊಂಡು ಹೋಗು ಎಂಬ ಅರ್ಥದಲ್ಲಿಯೇ ಇರುವುದಾದರೂ "ಯೇ ಯೇ ಗತ್ಯರ್ಥಕಾಃ ತೇ ತೇ ಜ್ಞಾನಾರ್ಥಕಾಃ" ಅಂದರೆ ಯಾವುದು ಗಮನದ ಅರ್ಥದಲ್ಲಿದೆಯೋ ಅವುಗಳೆಲ್ಲವೂ ಜ್ಞಾನ ಎಂಬ ಅರ್ಥವುಳ್ಳವುಗಳಾಗಿವೆ ಎನ್ನುವುದರಿಂದ ತಿಳಿಸು ಅನ್ನುವುದನ್ನೇ ಶಾಸ್ತ್ರಕಾರರು ಒಪ್ಪಿದ್ದಾರೆ) ಆದ್ದರಿಂದಲೇ ಜ್ಞಾನವನ್ನು ಬೆಳಕು ಅನ್ನುತ್ತಾರೆ; ಅಜ್ಞಾನವನ್ನು ಕತ್ತಲೆ ಅನ್ನುತ್ತಾರೆ. ಅಂತಹ ಬೆಳಕಿನ ಅಭಿಮಾನೀ ದೇವತೆಯಾದ ಅಗ್ನಿಯಲ್ಲಿ ಹಾಗಾಗಿಯೇ ಪ್ರಾರ್ಥಿಸುವುದು . "ಅಗ್ನೇ ನಯ ಸುಪಥಾ ರಾಯೇ....." ಎಂದು .
ಇಷ್ಟೆಲ್ಲ ಕಷ್ಟ ಇರುವ ಬೆಳಕನ್ನು ಹೊಂದಲು ದಾರಿ ಯಾವುದಯ್ಯ ಅಂದರೆ ದಾಸರಂದರು "ಬಲುಭವದನುಭವದಿ ಕತ್ತಲೆಯೊಳು ಬಲು ಅಂಜುತ ನಡೆದೆ......." ಎಂದು. ಆ ಭವದ ಕತ್ತಲೆಯನ್ನು ಕಳೆಯಲು ಜ್ಞಾನವೆಂಬ ಬೆಳಕು ಸುಲಭವಾಗಿ ಸಿಕ್ಕೀತೇ? ಅದಕ್ಕೂ ಸಂಸ್ಕಾರ ಬೇಕು. ಒಂದೊಂದೇ ಮೆಟ್ಟಿಲು ದಾಟಬೇಕು. ಒಂದನೆಯ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕಲಿತದ್ದನ್ನೇ ಮೆಲುಕು ಹಾಕಬೇಕು. (ಶ್ರವಣದೊಂದಿಗೆ ಮನನ) ಅದನ್ನೇ ಮನದೊಳಗೆ ತುಂಬಬೇಕು (ನಿಧಿಧ್ಯಾಸನ). ಆವಾಗ ಸಂಶೋಧನೆಯಿಂದ ಜ್ಞಾನ ಸಿದ್ಧಿಸುತ್ತದೆ. ಆವಾಗ ಬೆಳಕಿನ ಹರಿವು ಉಂಟಾಗುತ್ತದೆ. ಇಷ್ಟು ಮೆಟ್ಟಿಲು ಇದೆ ಈ ಜ್ಞಾನಕ್ಕೆ.
ಅಯ್ಯೋ ನೀವು ಮರೀಚಿಕೆಯನ್ನೇ ತಿಳಿಸುತ್ತೀರಿ ಸ್ವಾಮೀ. ನಮಗಾಗದ್ದು ಇದು. ನಾವು ಹೀಗೆಯೇ ಇರುತ್ತೇವೆ. ಅನ್ನುವವರೇ ಹೆಚ್ಚು. “ಇಲ್ಲ; ಇದನ್ನು ಜನಸಾಮಾನ್ಯರಿಗೂ ಮುಟ್ಟಿಸಬೇಕಾದ ಕರ್ತವ್ಯ ಇದೆ. ಅವರಿಗೂ ಅರ್ಥವಾಗುವಂತೆ ಹೇಳಬೇಕು" ಎಂದು ಮಹಾತ್ಮರು ಯೋಚಿಸಿದಲ್ಲಿ ಆವಾಗ ಇದನ್ನು ಸಾಧಿಸಬಹುದಾಗಿದೆ. ರಾಮ ಹೇಳಿದನಂತೆ "ಸಮಾಯಾತ ಸಮಾಯಾತ ಯೇ ಯೇ ಮೋಕ್ಷಪದೇಚ್ಛವಃ" (ಯಾರು ಯಾರು ಮೋಕ್ಷ ಪದವನ್ನು ಅಪೇಕ್ಷಿಸುತ್ತೀರೋ ಅವರೆಲ್ಲ ಬನ್ನಿ ಬನ್ನಿ) ಎಂದು. ಇಂತಹ ಸಾಧನೆಗೆ  ಅಂತಹ ನೇತಾರನ ಅಗತ್ಯವಿದೆ. ಇಲ್ಲದಿದ್ದರೆ ಮರೀಚಿಕೆಯೇ.
ಕರಾವಳಿಗರು ಈ ವಿಚಾರದಲ್ಲಿ ಅದೃಷ್ಟವಂತರು. ನೇತಾರ ಯಾವನೆಂಬುದು ಅಜ್ಞಾತ. (ಈ ಬಗ್ಗೆ ಭಿನ್ನಾಭಿಪ್ರಾಯವಿದೆ). ಆದರೆ ಅಂತಹ ನಾಯಕನನ್ನು ಪಡೆದುಕೊಂಡದ್ದಂತೂ ಸತ್ಯ. ಅವನ ಸಾಧನೆಯಿಂದ ಪಡೆದುಕೊಂಡ ಬೆಳಕನ್ನು ಕಾಣಲು ಇತರರಿಗೆ ಸರಳ ದಾರಿಯನ್ನು ಕಂಡುಕೊಂಡ.  ಅವನ ದೆಸೆಯಿಂದ ಋಷಿಗಳು ಅಂದು ದರ್ಶನವನ್ನು ಜಗತ್ತಿಗೆ  ತಿಳಿಸುವುದಕ್ಕಾಗಿ ರಾತ್ರಿಯ ಪ್ರಕೃತಿಯಲ್ಲಿ ಅಂದರೆ ಬಯಲಲ್ಲಿ ನವರಸಭರಿತವಾದ ಜ್ಞಾನ ಅಂದರೆ ಬೆಳಕನ್ನು ಕಾಣುವಂತಾದರು. ಅದನ್ನೇ ‘ಆಟ’ ಅಂದರು. (ಹಿಂದೆ ಹೇಳಿದಂತೆ ‘ಅಟ ಗತೌ’ ಅಂದರೆ ಗತಿ ಅರ್ಥವು ಹೆಚ್ಚಾಗಿ ಜ್ಞಾನಾರ್ಥವನ್ನು ಹೇಳುವುದರಿಂದ ಜ್ಞಾನ ಎಂಬ ಅರ್ಥದಲ್ಲಿ). ಅದನ್ನೇ ಬಯಲಲ್ಲಿ ಆಗುವ ಕಾರಣ ಬಯಲಾಟ ಅಂದರು. ಇದನ್ನೇ ಬೇರ್ಪಡಿಸಿ ತಾಳಮದ್ದಲೆ ಎಂಬ ಸಾಹಿತ್ಯಪ್ರಬೇಧ ಅಥವಾ ಕಲಾಪ್ರಕಾರವಾಗಿ ಅರಿತುಕೊಂಡರು. ಕೊನೆಗೆ ಅದನ್ನೇ ಒಟ್ಟಾಗಿ ಯಕ್ಷಗಾನ ಅಂದರು (ಯಕ್ಷ ಅಂದರೆ ಅಲೌಕಿಕ, ಗಾನ ಅಂದರೆ ಶಬ್ದ ಅಂದರೆ ವೇದಪುರಾಣಗಳು.)
ಈ ಯಕ್ಷಗಾನವು ಕಾಂತಾಸಮ್ಮಿತೆಯಲ್ಲೇ ಇರುವುದರಿಂದ ಅಂದರೆ ಕಾವ್ಯಮಯವಾಗಿ ಇರುವುದರಿಂದ ಜನಸಾಮಾನ್ಯರೂ ಅರ್ಥೈಸಿಕೊಳ್ಳಲು ಸುಲಭವಾಯಿತು. ಇದರಿಂದ ನಿರಕ್ಷರಕುಕ್ಷಿಗಳೂ ದರ್ಶನದ ಅರಿವನ್ನು ಸಾಂಗವಾಗಿ ಉಣ್ಣುವಂತಾಯಿತು. ಕತ್ತಲೆಯಲ್ಲಿ ಬೆಳಕನ್ನು ಕಾಣುವಂತಾಯಿತು. ಆದ್ದರಿಂದಲೇ ತಿಳಿದವರು ಇದನ್ನು ಕರೆದರು; ಇದು ಬೆಳಕಿನ ಸೇವೆ ಎಂದು.
ಇದು ದುರ್ಗೆಯ ಅಂದರೆ ಕತ್ತಲಿನ ರೂಪದಲ್ಲಿರುವವಳ ಅಥವಾ ರಾತ್ರಿಸ್ವರೂಪಿಣಿಯ ಮೂಲಕ ಅವಳಲ್ಲೇ ಬೆಳಕನ್ನು ಕಾಣಿಸುವ ನಮ್ಮ ಹೆಮ್ಮೆಯ ಯಕ್ಷಗಾನವೆಂಬ ಅಮ್ಮನ ಕಲೆ. ಆ ಹೆಸರಿನ ಬಗೆಗೆ ಒಂದು ವಿವೇಚನೆ. ಇದಕ್ಕಾಗಿ ಅವಳನ್ನು ವೇದ ಹೊಗಳಿತು.
"ತಾಮಗ್ನಿವರ್ಣಾಮ್ ತಪಸಾ ಜ್ವಲಂತೀಮ್ ವೈರೋಚನೀಮ್ ಕರ್ಮಫಲೇಷು ಜುಷ್ಟಾಮ್  / ದುರ್ಗಾಮ್ ದೇವೀಮ್ ಶರಣಮಹಮ್ ಪ್ರಪದ್ಯೇ ಸುತರಸಿತರಸೇ ನಮಃ " ಎಂದು.
ಒಳ್ಳೆಯ ಯೋಚನೆಯನ್ನು ಕೊಡಲು ಆ ಅಗ್ನಿವರ್ಣೆಯನ್ನು, ತಪಸ್ಸಿಂದ ಪ್ರಜ್ವಲಿಸುತ್ತಿರುವ ದುರ್ಗಾದೇವಿಯನ್ನು ಶರಣು ಹೊಂದೋಣ. ಬೆಳಕಿನ ಸೇವೆಯನ್ನು ನೋಡೋಣ, ಕೇಳೋಣ, ಅದನ್ನೇ ಮೆಲುಕುಹಾಕೋಣ; ಅದನ್ನೇ ನಮ್ಮೊಳಗೆ ತುಂಬಿಸೋಣ. ತನ್ಮುಖೇನ ಬೆಳಕಿನೆಡೆಗೆ ಸಾಗೋಣ.
-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
            Vidwan Sriharinarayanadasa Asranna, Kateelu

No comments:

Post a Comment